ಬಂಟ್ವಾಳ: ಕೆಎಸ್ಆರ್ ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಬಿ.ಸಿ.ರೋಡ್ ಘಟಕದಲ್ಲಿ ರವಿವಾರ
ಬಂಟ್ವಾಳ ತಹಶೀಲ್ದಾರ್ ವಿ.ಎಸ್.ಕೂಡಲಗಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿಸ ಅವರು ಯೋಜನೆಯಡಿ ಆರು ವರ್ಷದ ಹೆಣ್ಣು ಮಗುವಿನಿಂದ ಹಿಡಿದು ಹಿರಿಯ ಮಹಿಳೆಯರವರೆಗೂ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ತಾಲೂಕಿನ ಮಹಿಳೆಯರು ಸರಕಾರದ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಶಕ್ತಿ ಯೋಜನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕೆ ಹೊಸ ಅವಕಾಶ ಕೊಟ್ಟಂತಾಗಿದೆ. ದೈನಂದಿನ ಪ್ರಯಾಣದಲ್ಲಿ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ರಾಜ್ಯ ಸರಕಾರ ಘೋಷಿಸಿದ್ದ ೫ ಗ್ಯಾರಂಟಿಗಳಲ್ಲಿ ಒಂದು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದರು.
ಬಂಟ್ವಾಳ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಪ್ರತಾಪ್ ಸಿಂಗ್ ಥೋರಟ್ ಅವರು ಮಾತನಾಡಿ, ವಿದ್ಯಾರ್ಥಿನಿಯರು, ಶಿಕ್ಷಕಿಯರು, ಹಿರಿಯ ಮಹಿಳೆಯರಿಗೆ ಯೋಜನೆ ಹೆಚ್ಚು ಅನುಕೂಲವಾಗಿದೆ. ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಎಲ್ಲರೂ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬಂಟ್ವಾಳ ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ವಿಭಾಗೀಯ ಲೆಕ್ಕಪತ್ರಾಧಿಕಾರಿ ಆಶಾಲತಾ ಅವರು ಉಪಸ್ಥಿತರಿದ್ದರು.
ಘಟಕ ವ್ಯವಸ್ಥಾಪಕ ಶ್ರೀಶ ಭಟ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಯೋಜನೆಯಲ್ಲಿ ಪ್ರಯಾಣ ದೂರದ ಯಾವುದೇ ಮಿತಿ ಇಲ್ಲ. ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯವಾಗುತ್ತದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವೇಂದ್ರ ಗುಡಿಗಾರ್ ಸ್ವಾಗತಿಸಿದರು. ಸಹಾಯಕ ಕೆ. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಸಂಚಾರ ಅಧೀಕ್ಷಕ ಗಣೇಶ್ ಪೈ ವಂದಿಸಿದರು.