ಬಂಟ್ವಾಳ: ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಿಲಂಬಂ ಸ್ಪರ್ಧೆಯಲ್ಲಿ ಡಬಲ್ ಸ್ಟಿಕ್ ಹಾಗು ವಾಲ್ ವೇಚೂ ವಿಭಾಗದಲ್ಲಿ ವೆನಿಲ್ಲಾ ಮಣಿಕಂಠ ಇವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಈ ಸ್ಪರ್ಧಾ ಕೂಟದಲ್ಲಿ ಸ್ವಿಟ್ಜರ್ಲ್ಯಾಂಡ್, ದುಬೈ, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಒಟ್ಟು 10 ರಾಷ್ಟ್ರಗಳ ಪರಿಣಿತ ಮಾರ್ಷಲ್ ಆರ್ಟ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ ಭಾರತವನ್ನು ಪ್ರತಿನಿಧಿಸಿದ್ದ ವೆನಿಲ್ಲಾ ಮಣಿಕಂಠ ಡಬಲ್ ಸ್ಟಿಕ್ ಹಾಗು ವಾಲ್ ವೇಚೂ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಗೆದ್ದುಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಮುಡಿಪು ನವಗ್ರಾಮ ಸೈಟ್ ನ ದಿ.ನೀಲಕಂಠ ಹಾಗು ಸುಮತಿ ದಂಪತಿಗಳ ಪುತ್ರಿಯಾದ ವೆನಿಲ್ಲಾ ಮಣಿಕಂಠ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಕರಾಟೆ, ಜೂಡೋ, ಸಿಲಂಬಂ, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್ನಲ್ಲಿ ಪರಿಣತಿಯನ್ನು ಪಡೆದುಕೊಂಡಿದ್ದಲ್ಲದೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ತನ್ನ ಪ್ರೌಢಶಿಕ್ಷಣವನ್ನು ಕಲ್ಲಡ್ಕದ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮವನ್ನು ಬಂಟ್ವಾಳದ ಸರ್ಕಾರಿ ಪಾಲಿಟೆಕ್ನಿಕ್, ವಾಮಂಜೂರಿಒನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿಯನ್ನು ಪದವಿಯನ್ನು ಮುಗಿಸಿದ್ದಾರೆ. ಇದೀಗ ಸುರತ್ಕಲ್ನ ಎನ್ಐಟಿಕೆ ಇಲ್ಲಿ ಜಿಯೋಟೆಕ್ನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಸ್ನಾತಕೋತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಭಾರತ ಅತ್ಯಂತ ಪುರಾತನ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಐಐಟಿ ಖರಗ್ಪುರ, ಇಲ್ಲಿ ಗಣಿಗಾರಿಕಾ ವಿಭಾಗದಲ್ಲಿ ಪಿಎಚ್ಡಿ ಪದವಿ ಅಧ್ಯಯನ ಮಾಡಲು ಪ್ರವೇಶ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕರಾಟೆ, ಜುಡೋ, ಟಿಕ್ವಾಂಡೊ, ಎಂಎಂಎ ಮೊದಲಾದ ಮಾರ್ಷಲ್ ಆರ್ಟ್ನಲ್ಲಿ ಬ್ಲಾಕ್ ಬೆಲ್ಟ್ ಸಾಧಕಿಯಾಗಿರುವ ಈಕೆ ಭಾರತನಾಟ್ಯ ಪಟುವೂ ಹೌದು. ಯೋಗದಲ್ಲಿ ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ಹಾಗೂ ಹಠ ಯೋಗದಲ್ಲಿ ಡಿಪ್ಲೋಮ ಮತ್ತು ಇದೀಗ ಕರೆಸ್ಪಾಂಡೆನ್ಸ್ ಮೂಲಕ ಸೈಕಾಲಜಿ ವಿಭಾಗಲ್ಲಿ ಎಂಎಸ್ಸಿ ಮಾಡುತಿದ್ದರೆ. ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ, ಎನ್ಐಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್, ಸ್ಕೇಟಿಂಗ್ ತರಬೇತಿ ನೀಡುತ್ತಿದ್ದು ಖ್ಯಾತ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೊಟ್ಲು ಅವರ ಶಿಷ್ಯೆಯಾಗಿದ್ದಾರೆ. ಮಾರ್ಷಲ್ ಆರ್ಟ್ ಗುರುಗಳಾದ ರಾಜೇಶ್ ಬ್ರಹ್ಮರಕೂಟ್ಲು ಅವರ ಬಳಿಯಲ್ಲಿ ಕರಾಟೆ, ಜೂಡೋ, ಸಿಲಂಬಂ, ಯೋಗ, ಸ್ಕೇಟಿಂಗ್ ಮತ್ತಿತರ ವಿದ್ಯೆಗಳ ತರಬೇತಿ ಪಡೆದುದ್ದಲ್ಲದೆ ರಸಾಯನ ಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರಗಳ ಅಧ್ಯಯನಕ್ಕೆ ಮಾರ್ಗದರ್ಶನವನ್ನು ಪಡೆದಿದ್ದೇನೆ. ಇದರಿಂದಾಗಿ ಕ್ರೀಡೆ ಹಾಗೂ ಕಲಿಕೆ ಎರಡೂ ಕ್ಷೇತ್ರದಲ್ಲೂ ಜೊತೆಯಾಗಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ವೆನಿಲ್ಲಾ ಮಣಿಕಂಠ ಪ್ರತಿಕ್ರಿಯಿಸಿದ್ದಾರೆ. ಬಡ ಕುಟುಂಬದ ಪ್ರತಿಭಾವಂತ ಯುವತಿಯ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ವೆನಿಲ್ಲಾ ಮಣಿಕಂಠ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.
—