ಬಂಟ್ವಾಳ: ತಾಲೂಕಿನ ದಾಸಕೋಡಿಯ ನೆಲ್ಲಿ ಎಂಬಲ್ಲಿ ವಾಸವಿರುವ ಗೀತಾ ರವೀಂದ್ರ ಪೂಜಾರಿ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ದುರಸ್ತಿಗೊಳಿಸಲಾಗಿದ್ದು ಸುಂದರ ಗೊಂಡಿರುವ ಮನೆಯ ಗೃಹಪ್ರವೇಶ ನಾಳೆ (ಜೂ.7) ನಡೆಯಲಿದೆ.
ಗೀತಾ ರವೀಂದ್ರ ಪೂಜಾರಿಯವರು ತಾಯಿ ಮತ್ತು ತಮ್ಮನೊಂದಿಗೆ ಬಡತನದ ಜೀವನ ನಡೆಸುತ್ತಿದ್ದು ತಾಯಿ ಮತ್ತು ತಮ್ಮನ ಮರಣ ನಂತರ ನಿರ್ವಹಣೆ ಇಲ್ಲದೆ ಜೀರ್ಣಾವಸ್ಥೆಗೆ ತಲುಪಿದ್ದ ಮನೆಯಲ್ಲಿ ವಾಸವಿರಲು ಸಾಧ್ಯವಾಗದೆ ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಹಲವಾರು ವರುಷ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ತನ್ನ ಕಷ್ಟ ಜೀವನದ ವಿಚಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಸಹಾಯ ಕೋರಿ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂಧಿಸಿದ ಧರ್ಮಾಧಿಕಾರಿಗಳು ವಾತ್ಸಲ್ಯ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ದುರಸ್ತಿಗೆ ಆರ್ಥಿಕ ಸಹಕಾರ ಮಂಜೂರುಗೊಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಚೆನ್ನಪ್ಪ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಸೇವಾ ಪ್ರತಿನಿಧಿಗಳಾದ ವಿದ್ಯಾ, ಗಣೇಶ್, ವಲಯ ಅಧ್ಯಕ್ಷೆ ತುಳಸಿ, ಜ್ಞಾನವಿಕಾಸ ವಿಟ್ಲ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ, ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ಮಾಧವ ಸಾಲಿಯಾನ್ ಇವರ ಮುತುವರ್ಜಿಯೊಂದಿಗೆ ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡವು ಪೆರ್ನೆ ಘಟಕದ ಸಹಕಾರದೊಂದಿಗೆ ಮನೆ ರಿಪೇರಿ ಕೆಲಸ ಕಾರ್ಯ ಆರಂಭಿಸಿತು. ಅವಿರತ ಶ್ರಮದಾನದೊಂದಿಗೆ ಅವ್ಯವಸ್ಥೆಯಲ್ಲಿದ್ದ ಮನೆಯನ್ನು ವ್ಯವಸ್ಥಿತವಾಗಿ ರೂಪುಗೊಳಿಸಲಾಯಿತು.
ಇದೀಗ ಮನೆ ಸುಂದರಗೊಂಡಿದ್ದು ಸುಣ್ಣ ಬಣ್ಣ ಹೊಸ ರೂಪದೊಂದಿಗೆ ಕಂಗೊಳಿಸುತ್ತಿದೆ. ಇಂದು ವಾತ್ಸಲ್ಯ ಮನೆಯ ಗ್ರಹಪ್ರವೇಶ ಕಾರ್ಯದೊಂದಿಗೆ ಬಡ ಕುಟುಂಬಕ್ಕೆ ಹಸ್ತಾಂತರಗೊಳ್ಳಲಿದೆ.
ಆರ್ಥಿಕ ತೊಂದರೆಯಿಂದಾಗಿ ಈವರೆಗೆ ಬಾಡಿಗೆ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದ ಬಡ ಕುಟುಂಬ ಇದೀಗ ತನ್ನ ಸ್ವಂತ ಮನೆಯನ್ನು ಗೃಹಪ್ರವೇಶಗೊಳಿಸುವ ಸಂಭ್ರಮದಲ್ಲಿದೆ. ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ವರನ್ನು ಕೃತಜ್ಞತಾ ಭಾವದಿಂದ ಸ್ಮರಿಸುತ್ತಿದ್ದಾರೆ.