ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದೊಂದಿಗೆಗೆ 122 ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಎಂ. ವೈ. ಉದಯರವಿ ಭಾಗವಹಿಸಿ ಸ್ವಯಂ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು.
ಅವರು ಮಾತನಾಡಿ ತುರ್ತು ಸಂದರ್ಭದಲ್ಲಿ ನಮ್ಮ ಬಂಧುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಕ್ತದ ಮಹತ್ವ ಏನು ಎನ್ನುವುದು ಎಲ್ಲರಿಗೂ ಅರಿವಾಗುತ್ತದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಬಹುದು ಜೊತೆಗೆ ಓರ್ವ ವ್ಯಕ್ತಿಯ ಪ್ರಾಣವನ್ನು ರಕ್ಷಿಸಬಹುದಾಗಿದೆ ಎಂದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಮಾತನಾಡಿ ರಕ್ತಕ್ಕೆ ರಕ್ತವೇ ಪರ್ಯಾಯವಾಗಿದ್ದು ಅದನ್ನು ರಕ್ತದಾನದ ಮೂಲಕವೇ ಪಡೆಯಬೇಕಾಗಿದೆ. ಆದ್ದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರೋಗಿಯ ಪ್ರಾಣ ಉಳಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ ಎಂದರು.
ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಮುಖ್ಯಸ್ಥೆ ಡಾ. ಶ್ರೀಲೇಖಾ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿಗಳಾದ ಪೆಲಪಾಡಿ ಸುರೇಶ್ ರೈ, ಕೊಡ್ಮಾಣ್ ದೇವದಾಸ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ಬಿ.ನಾರಾಯಣ ಮೇರಮಜಲು, ಶಿವರಾಜ್ ಸುಜೀರ್, ಹರ್ಷರಾಜ್ ಸುಜೀರ್, ಅರ್ಜುನ್ ಪೂಂಜ, ಪ್ರಕಾಶ್ ಕಿದೆಬೆಟ್ಟು, ಪುಂಚಮೆ ಪದ್ಮನಾಭ ಶೆಟ್ಟಿ, ಎಂ.ಕೆ. ಖಾದರ್ ಮಾರಿಪಳ್ಳ, ತೇವು ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ತೇವು ತಾರನಾಥ ಕೊಟ್ಟಾರಿ ಸ್ವಾಗತಿಸಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಒಟ್ಟು 46 ಯುನಿಟ್ ರಕ್ತ ಸಂಗ್ರಹವಾಯಿತು.
—