ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಶಾಲಾರಂಭವನ್ನು ಸಂಸ್ಥೆಯ ಸಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಾಡಲಾಯಿತು.
ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತಾನಾಡಿ ಶ್ರೀರಾಮ ಸಂಸ್ಥೆಯು ಕಲಿಕೆ, ಆಚಾರ- ವಿಚಾರ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ಭಿನ್ನವಾದ ಶಿಕ್ಷಣ ಪದ್ಧತಿಯನ್ನು ಹೊಂದಿದೆ. ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ ಹಾಗೂ ಗುರುದೇವೋಭವ ಎನ್ನುವ ನಾಲ್ಕು ನಿಯಮಗಳನ್ನು ಪಾಲಿಸುತ್ತಾ, ತಂದೆ, ತಾಯಿ ಪ್ರತ್ಯಕ್ಷ ದೇವರಿದ್ದಂತೆ, ಹಾಗಾಗಿ ದಿನನಿತ್ಯ ಶಾಲೆಗೆ ಬರುವ ಮುನ್ನ ತಂದೆ ತಾಯಿಗೆ ನಮಸ್ಕರಿಸಿ ಬರುವಂತೆ ಕಿವಿ ಮಾತು ಹೇಳಿದರು. ಹಾಗೆಯೇ ಮುಂದಿನ ವಿದ್ಯಾರ್ಥಿ ಜೀವನ ಉತ್ತಮವಾಗಿರಲಿ, ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೂತನವಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಸಂಸ್ಥೆಯ ಹಿರಿಯರು ತಿಲಕಧಾರಣೆ ಮಾಡಿ ಆಶೀರ್ವದಿಸಿದರು.
ನಂತರ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ಸಿಹಿ ನೀಡಿ ನೂತನ ಶೈಕ್ಷಣಿಕ ವರ್ಷಕ್ಕೆ ಆದರದಿಂದ ಬರಮಾಡಿಕೊಂಡರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನುವಿದ್ಯಾರ್ಥಿನಿ ವೈಷ್ಣವಿ ಕಾಮತ್ ನಿರೂಪಿಸಿದರು