ಬಂಟ್ವಾಳ,: ಕಲಾವಿದರು ಯಾವ ರೀತಿ ಬದುಕಬೇಕು ಎನ್ನುವುದಕ್ಕೆ ಆದರ್ಶ ಪಟ್ಲ ಸತೀಶ್ ಶೆಟ್ಟಿ. ಕಲಾವಿದರ ಕಷ್ಟ ತಿಳಿದು ಅವರ ಕಷ್ಟದಲ್ಲಿ ತಾನು ಭಾಗಿಯಾಗುವ ನಿಟ್ಟಿನಲ್ಲಿ ಇಂತಹ ಫೌಂಡೇಷನ್ ಹಾಕಿ ಕೊಂಡು
ವಿಶ್ವವ್ಯಾಪಿಯಾಗಿ ಕೆಲಸ ನಿರ್ವಹಿಸುವ ಈ ಫೌಂಡೇಶನ್ ಇನ್ನಷ್ಟು ಸಮಾಜ ಮುಖಿ ಸೇವೆ ನೀಡಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿ ಪದಗ್ರಹಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಅನುಗ್ರಹ ಇದ್ದಾಗ ಎಂತಹ ಯೋಗ ಭಾಗ್ಯಗಳು ನಮ್ಮನ್ನು ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಪಟ್ಲ ಸತೀಶ್ ಶೆಟ್ಟಿ ಉದಾಹರಣೆ. ಅವರ ದೂರದೃಷ್ಟಿ ಯೋಜನೆಗಳು ಎಲ್ಲರಿಗೂ ಮಾದರಿಯಾದುದು. ಕಲಾವಿದರಿಗೆ ಮಾತ್ರವಲ್ಲದೆ, ವಿದ್ಯಾರ್ಥಿಗಳು, ರೋಗಿಗಳಿಗೂ ಸೇವೆ ನೀಡುತ್ತಿರುವುದು ವಿಶೇಷ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದನಾಗಿ ಯಶಸ್ವಿಯಾಗಿರುವುದು ಮಾತ್ರವಲ್ಲದೆ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜೀವನವು ಉತ್ತಮವಾಗಿ ಸಾಗಬೇಕು ಎನ್ನುವ ಅವರ ಚಿಂತನೆ ಶ್ಲಾಘನೀಯ ಎಂದರು.
ಬಂಟ್ವಾಳ ಘಟಕದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಫೌಂಡೇಶನ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಧಾರ್ಮಿಕ ಮುಂದಾಳು ರವಿಶಂಕರ್ ಶೆಟ್ಟಿ ಬಡಾಜೆಗುತ್ತು ಉಪಸ್ಥಿತರಿದ್ದರು
ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ನೂತನ ಪದಾಧಿಕಾರಿಗಳ ವಿವರ ನೀಡಿ, ಗೌರವಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷರಾಗಿ ಚಂದ್ರಹಾಸ ಡಿ.ಶೆಟ್ಟಿ, ಸಂಚಾಲರಾಗಿ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಬಿ.ದೇವದಾಸ್ ಶೆಟ್ಟಿ, ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಭುಜಂಗ ಸಾಲ್ಯಾನ್ ಬಿ.ಸಿ.ರೋಡು, ಜಯಪ್ರಕಾಶ್ ಜಕ್ರಿಬೆಟ್ಟು, ಜತೆ ಕಾರ್ಯದರ್ಶಿ ಮೋಹನದಾಸ ಕೊಟ್ಟಾರಿ ಸಜೀಪ, ಕೋಶಾಧಿಕಾರಿ ಶಂಕರ ಶೆಟ್ಟಿ ಪರಾರಿಗುತ್ತು ಮೊದಲಾದವರು ಪದಗ್ರಹಣ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ, ಯುವ ಭಾಗವತ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು.
ಬೂಡಾ ಮಾಜಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು.