ಬಂಟ್ವಾಳ: ಸುಮಾರು 1.5ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ತಾ. ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಮೇ 20 ಶನಿವಾರ ರಂದು ಚಾಲನೆ ದೊರಕಿತು.
ಆ ಪ್ರಯುಕ್ತ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಂದರೆ ಹೋಗದ ಜ್ಞಾನ ಮತ್ತು ಹೋದರೆ ಬಾರದ ಮಾನ ಈ ಎರಡನ್ನು ಜತನದಿಂದ ಕಾಯ್ದಾಗ ಬದುಕು ಹಸನಾಗುವುದು. ಪ್ರಾಣದೇವರ ಉಪಾಸನೆಯಿಂದ ಜ್ಞಾನ ವೃದ್ಧಿಯಾಗುವುದು ಎಂದು ಹೇಳಿದರು.
ತ್ಯಾಗ, ಸೇವೆಗಳಿಗೆ ಪ್ರತೀಕ ಹನುಮ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಹೊಸ್ತಿಲಲ್ಲಿ ಮುಖ್ಯಪ್ರಾಣನ ದೇಗುಲವೂ ಪುನರ್ ನಿರ್ಮಾಣಗೊಂಡಿರುವುದು ರಾಷ್ಟ್ರ ಅಭಿವೃದ್ಧಿಯ ಸಂಕೇತ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತ್ತೆ ಶಾಸಕನನ್ನಾಗಿ ಆಯ್ಕೆ ಮಾಡಿದ ಜನತೆಗೆ ಅಭಾರಿಯಾಗಿದ್ದು, ಜನರ ಸೇವೆ ಮಾಡಲು ಅವಕಾಶ ಲಭಿಸಿದೆ. ಈ ಹಿಂದಿಗಿಂತಲೂ ಮತ್ತಷ್ಟು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕಾಡಬೆಟ್ಟು ಚಂದ್ರನಿಲಯ ಕೀರ್ತಿರಾಜ್ ಜೈನ್, ನಿವೃತ್ತ ಮುಖ್ಯ ಶಿಕ್ಷಕ ಗಂಗಾಧರ ರೈ ಮಾಣಿ, ವಾಮದಪದವು ವೈದ್ಯ ಡಾ.ರವಿ ಶರ್ಮ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬಂಟ್ವಾಳ ಅಧಿಕಾರಿ ಮಾಧವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಗೌರವ ಸಲಹೆಗಾರರರಾದ ಸುಲೋಚನಾ ಜಿ.ಕೆ.ಭಟ್,ಕಾರ್ಯಾಧ್ಯಕ್ಷರಾದ ಪ್ರಮೋದ್ ಕುಮಾರ್ ರೈ, ವೀರೇಂದ್ರ ಅಮೀನ್, ಪ್ರ.ಕಾರ್ಯದರ್ಶಿ ಅನಂತರಾಮ ನಾಯಕ್, ಕೋಶಾಽಕಾರಿ ಜಯರಾಮ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅದ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಸುರೇಶ್ ಉರುಡಾಯಿ ವಂದಿಸಿದರು.ಶಿಕ್ಷಕರಾದ ಧರಣೇಂದ್ರ ಕುಮಾರ್ ಜೈನ್, ಹರಿಪ್ರಸಾದ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.