ಬಂಟ್ವಾಳ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್
ಮಿಷನ್ ನಗರ ೨.೦ ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಆರಂಭಿಸಿದ್ದು, ನನ್ನ ಜೀವನ ನನ್ನ ಸ್ವಚ್ಛನಗರ ಯೋಜನೆ ಕಾರ್ಯಕ್ರಮಕ್ಕೆ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಮಂಗಳೂರು ನಗರ ಕೋಶದ ಯೋಜನಾ ನಿರ್ದೇಶಕ ಅಬಿದ್ ಗದ್ಯಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವೀಕರಿಸಿ ಮರುಬಳಸಬಹುದಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆ ಮಾಡುವಂಥ ಉದ್ದೇಶದಿಂದ ನನ್ನ ಜೀವನ ನನ್ನ ಸ್ವಚ್ಚ ನಗರ ಯೋಜನೆಯ ಕಾರ್ಯಕ್ರಮದಡಿ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ಬಳಕೆ ಕೇಂದ್ರಗಳನ್ನು ಬಂಟ್ವಾಳ ಪುರಸಭಾ ವ್ಯಾಪ್ತಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಗುರುತಿಸಿರುವ ಎಂ.ಆರ್.ಎಫ್. ಗಳಲ್ಲಿ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರುಪಡೆಯುವ ಸೌಲಭ್ಯ ಕೇಂದ್ರಗಳನ್ನು ರೆಡ್ಯುಸ್, ರಿಯೂಸ್ ಮತ್ತು ರಿಸೈಕಲ್ (ಆರ್.ಆರ್.ಆರ್.) ಕೇಂದ್ರಗಳಾಗಿ ಬಳಸಿ, ನನ್ನ ಜೀವನ ನನ್ನ ಸ್ವಚ್ಚ ನಗರ ಯೋಜನೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಬಂಟ್ವಾಳ ಪುರಸಭೆ ತೀರ್ಮಾನಿಸಿದ್ದು ಜೂನ್ ೫ರವರೆಗೆ ವಸ್ತು ಮರುಪಡೆಯುವ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಬಡ್ಡಕಟ್ಟೆ ವೈಕುಂಠ ಬಾಳಿಗ ವಾಣಿಜ್ಯ ಸಂಕೀರ್ಣ, ಬಿ.ಸಿ. ರೋಡ್ ಬಸ್ ನಿಲ್ದಾಣ ಬಳಿ, ಪಾಣೆಮಂಗಳೂರು ಮಾರುಕಟ್ಟೆ ಬಳಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಟಿಕೆ ವಸ್ತುಗಳು, ಪ್ಲಾಸ್ಟಿಕ್, ಬಳಸಿದ ಬಟ್ಟೆ, ದಿನಪತ್ರಿಕೆ, ಹಳೆ ಪುಸ್ತಕ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಂಥ ನವೀಕರಿಸಿ ಮರುಬಳಸಬಹುದಾದದ್ದನ್ನು ಒದಗಿಸಬಹುದು ಎಂದರು. ಭಾಗವಹಿಸಿದ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು ಎಂದು ಈ ಸಂದರ್ಭ ಅವರು ಹೇಳಿದರು.
ಈ ಸಂದರ್ಭ ಸ್ವರ್ಣೋದ್ಯಮಿ ಸುನಿಲ್ ಆಚಾರ್ಯ ಅವರು ಮರುಬಳಕೆ ವಸ್ತುಗಳನ್ನು ಒದಗಿಸಿದರು. ಕಾರ್ಮೆಲ್ ಕಾನ್ವೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಭಿಯಾನದಲ್ಲಿ ಸಹಕರಿಸಿದರು.
ಪುರಸಭೆ ಸದಸ್ಯ ಎ.ಗೋವಿಂದ ಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ, ಸ್ವರ್ಣೋದ್ಯಮಿ ಸುನಿಲ್ ಕೆ, ಕಾರ್ಮೆಲ್ ಕಾನ್ವೆಂಟ್ ಪ್ರಿನ್ಸಿಪಾಲ್ ಭಗಿನಿ ಲತಾ, ಪ್ರಮುಖರಾದ ಎ.ದಾಮೋದರ ಸಂಚಯಗಿರಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸ್ವಸಹಾಯ ಗುಂಪುಗಳ ಒಕ್ಕೂಟದ ವಸಂತಿ ಗಂಗಾಧರ ಜೇಸಿ ಸದಸ್ಯರಾದ ಕಿಶೋರ್ ಆಚಾರ್ಯ, ಉಮೇಶ ಪೂಜಾರಿ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು