ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಸ್ಟಾರ್ ಪ್ರಚಾರಕಲ್ಲೋರ್ವರಾದ ಯೋಗಿ ಆದಿತ್ಯನಾಥ್ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಬೃಹತ್ ರೋಡ್ಶೋ ನಡೆಸಿ ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಮತಯಾಚನೆ ನಡೆಸಿದರು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ರಥದ ಮಾದರಿಯ ವಾಹನದ ಮೂಲಕ ಆಗಮಿಸಿದ ಯೋಗಿ ಆದಿತ್ಯನಾಥ್ ಅವರಿಗೆ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಮೇಲ್ಸೆತುವೆಯ ಮೇಲಿಂದ ಪುಷ್ಪವೃಷ್ಠಿ ಹರಿಸಿ ಅದ್ದೂರಿಯ ಸ್ವಾಗತ ಕೋರಲಾಯಿತು. ಯೋಗಿ ಆದಿತ್ಯನಾಥ್ ಅವರು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಬೃಹತ್ ಜನಸ್ತೋಮಕ್ಕೆ ಕೈ ಬೀಸಿ ನಮಿಸಿದರು. ಶಾಸಕ ರಾಜೇಶ್ ನಾಯ್ಕ್ ಅವರು ಯೋಗಿ ಆದಿತ್ಯನಾಥ ಅವರಿಗೆ ಶ್ರೀ ಆಂಜನೇಯನ ಕಂಚಿನ ವಿಗ್ರಹವನ್ನು ನೆನೆಪಿನ ಕಾಣಿಕೆಯಾಗಿ ನೀಡಿದರು.
ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಬಜರಂಗದಳ ಭಾರತದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ. ಇದನ್ನು ಯಾರಿಂದಲೂ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಪ್ರಭು ಶ್ರೀರಾಮ ವನವಾಸದ ಸಂದರ್ಭದಲ್ಲಿ ಕಷ್ಟ ಕಾಲದಲ್ಲಿದ್ದಾಗ ಕರ್ನಾಟಕದ ಹನಮಂತ ಜೊತೆಗಿದ್ದು ಬಳಿಕ ಜೀವನ ಪೂರ್ತಿ ಶ್ರೀ ರಾಮನ ಜೊತೆ ಭಕ್ತಿಯ ಪರವಶತೆ ಮೆರೆದವನು, ಆದ್ದರಿಂದ ಸಾವಿರಾರು ವರ್ಷಗಳಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕ ಜೊತೆಯಾಗಿ ನಡೆಯಲು ಶ್ರೀರಾಮ ಆಂಜನೇಯರಿಂದಾಗಿ ಸಾಧ್ಯವಾಗಿದೆ ಎಂದರು.
ಕಾಂಗ್ರೆಸ್ ತನ್ನ ನಕರಾತ್ಮಕ ಚಿಂತನೆಗಳಿಂದ ಕರ್ನಾಟಕವನ್ನು ಪಿಎಫ್ಐ ಹಾಗೂ ಎಸ್ಡಿಪಿಐ ಯಂತ ದೇಶದ್ರೋಹಿ ಸಂಘಟನೆಗಳ ಸ್ಲೀಪರ್ ಸೆಲ್ ಮಾಡಲು ಹೊರಟಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಈ ಭಾರಿ ಕರ್ನಾಟಕದ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ. ಈ ಭಾರಿ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದ ಅವರು 2025 ರಲ್ಲಿ ನಡೆಯುವ ಅಯೋಧ್ಯ ಶ್ರೀರಾಮನ ಭವ್ಯ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಂಜನೇಯನ ಊರಾದ ಕರ್ನಾಟಕದ ಜನರಿಗೆ ವಿಶೇಷ ಆಹ್ವಾನ ನೀಡುವುದಾಗಿ ತಿಳಿಸಿದರು. .
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ರಥದಲ್ಲಿ ಯೋಗಿಯವರ ಜೊತೆಗಿದ್ದರು. ಜಿಲ್ಲೆ ಹಾಗೂ ತಾಲೂಕಿನ ಪಕ್ಷದ ವಿವಿಧ ಜವಬ್ದಾರಿಗಳ ಪದಾಧಿಕಾರಿಗಳು ಹಾಜರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:
ಯೋಗಿ ಆದಿತ್ಯನಾಥ್ ಬಂಟ್ವಾಳ ಭೇಟಿಯ ಹಿನ್ನಲೆಯಲ್ಲಿ ಶುಕ್ರವಾರದಿಂದಲೇ ಬಿ.ಸಿ.ರೋಡು ಹಾಗೂ ಕೈಕಂಬ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಆರ್ಪಿಎಫ್, ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ಬಂಟ್ವಾಳದಲ್ಲಿ ನಿಯೋಜಿಸಿ ಭದ್ರತೆಯನ್ನು ಒದಗಿಸಲಾಗಿತ್ತು.