ಬಂಟ್ವಾಳ : ಅಪಪ್ರಚಾರ, ಸುಳ್ಳು ಮತ್ತು ಕೋಮು ಭಾವನೆಯನ್ನು ಕೆರಳಿಸುವುದೇ ಬಿಜೆಪಿ ಬಂಡವಾಳ. ಬಿಜೆಪಿ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಇವರ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ. ಹೀಗಾಗಿ, ಸುಳ್ಳು ವದಂತಿಗಳ ಮೂಲಕವೇ ಚುನಾವಣೆ ಎದುರಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಏಮಾಜೆ ಹಾಗೂ ನೇರಳಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.
ನನ್ನ ಶಾಸಕ, ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರಕ್ಕೆ ೫,೦೦೦ ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಬಂಟ್ವಾಳದಲ್ಲಿ ಏನಾದರೂ ಸರಕಾರಿ ಯೋಜನೆಗಳು ಕಾರ್ಯಗತವಾಗಿದ್ದರೆ ಅದು ನನ್ನ ಅವಧಿಯಲ್ಲಿ ಜಾರಿಯಾಗಿರುವಂತದ್ದು. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಾಗಿದ್ದರೂ, ಅಪಪ್ರಚಾರದಿಂದ ನನ್ನನ್ನು ಸೋಲಿಸಲಾಗಿದೆ. ಸೋತ ಬಗ್ಗೆ ಬೇಸರವಿಲ್ಲ, ಅಪಪ್ರಚಾರ, ಸುಳ್ಳು, ವದಂತಿಗಳನ್ನು ಹರಡುವ ಮೂಲಕ, ವೈಯಕ್ತಿಕ ತೇಜೋವಧೆಯ ಮೂಲಕ ಸೋಲಿಸಿದ ವಿಧಾನದ ಬಗ್ಗೆ ನನಗೆ ಬೇಸರವಿದೆ. ಬಿಜೆಪಿಯ ಇಂತಹ ಕೃತ್ಯಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಗಮನವಿಟ್ಟು ಕೆಲಸ ಮಾಡಬೇಕು. ಕಳೆದ ಬಾರಿಯ ಸೋಲಿಗೆ ಈ ಬಾರಿ ಬಡ್ಡಿ ಸಹಿತ ಗೆಲುವು ದಾಖಲಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿಯ ಡಬ್ಬಲ್ ಎಂಜಿನ್ ಸರಕಾರದ ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗ, ಅಭದ್ರತೆ, ಅರಾಜಕತೆಯಿಂದ ಬೇಸತ್ತು ಜನತೆ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಭಾರೀ ದೊಡ್ಡ ಪ್ರಮಾಣದ ಭರವಸೆಯನ್ನು ಜನರಲ್ಲಿ ಮೂಡಿಸಿದೆ. ಇದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿAದ ಜಯ ದಾಖಲಿಸಲಿದೆ ಎಂಬ ವಿಶ್ವಾಸ ಮೂಡಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಕೆ.ಪಿ.ಸಿ.ಸಿ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಚೆಂಡ್ತಿಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಜಿಲ್ಲಾ ಕಾಂಗ್ರೆಸ್ ಮಾಜಿ ಕೋಶಾಧಿಕಾರಿ ವಿಜಯ ಕುಮಾರ್ ಸೊರಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ಬಿ.ಎಂ. ಅಬ್ಬಾಸ್ ಅಲಿ, ಶ್ರೀಧರ್ ರೈ ಕುರ್ಲೆತ್ತಿಮಾರು, ದೇರಣ್ಣ ಪೂಜಾರಿ, ಹಮೀದ್ ಕುಕ್ಕರಬೆಟ್ಟು, ನಿರಂಜನ್ ರೈ, ಪ್ರಕಾಶ್ ರೈ, ಅಬ್ಬಾಸ್ ನೇರಳಕಟ್ಟೆ, ಪದ್ಮನಾಭ ಶೆಟ್ಟಿ ಕೊಡಂಗೆಮಾರ್, ರಾಮಚಂದ್ರ ಶೆಟ್ಟಿ, ವಿಜಯ, ಸಮಿತಾ ಡಿ.ಪೂಜಾರಿ, ಪ್ರೇಮಾ, ಲಕ್ಷಿö್ಮ, ಹಾಜಿ ಕೆ. ಯೂಸುಫ್ ಕೊಡಾಜೆ, ನೀಲಯ್ಯ ಏಮಾಜೆ, ದರ್ಬಾರ್ ಅಬ್ದುಲ್ ಖಾದರ್, ಅಹ್ಮದ್ ಹಾಜಿ ಕುಕ್ಕರಬೆಟ್ಟು, ನಾರಾಯಣ ಗೌಡ, ಹಮೀದ್ ಪರ್ಲೊಟ್ಟು, ರಶೀದ್ ಪರ್ಲೊಟ್ಟು, ಬಿ.ಕೆ. ಬಂಗೇರ, ಎನ್.ಕೆ. ಅಬೂಬಕ್ಕರ್, ಪಿ.ಕೆ. ಅಬ್ಬಾಸ್ ಪರ್ಲೊಟ್ಟು, ಎನ್.ಕೆ. ಹಂಝ ಮತ್ತಿತರರು ಉಪಸ್ಥಿತರಿದ್ದರು.