ಬಂಟ್ವಾಳ: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲು ಹೊರಟಿರುವುದು ತೀವ್ರ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.
ಅವರು ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಟಿಷರು ಹೇಗೆ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರೋ ಅದೇ ರೀತಿ ಕಾಂಗ್ರೆಸ್ ಕೂಡ ಒಡೆದು ಆಳುವ ನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಈ ದೇಶದ ಅಸ್ಮಿತೆಯಯಾಗಿರುವ ಹಿಂಧೂ ಧರ್ಮವನ್ನು ಜಾತ್ಯಾತೀತತೆ, ತುಷ್ಠೀಕರಣ ಹೆಸರಿನಲ್ಲಿ ಮೆಟ್ಟುವ ಪ್ರಯತ್ನ ಮಾಡಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳು ತಮ್ಮ ಧರ್ಮದ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಿದೆ ಎಂದು ಆರೋಪಿಸಿದರು.
ಈ ದೇಶದ ಹಿಂದೂಗಳ ರಕ್ಷಣೆಗೋಸ್ಕರ ಹನುಮಂತನ ಹೆಸರಿನಲ್ಲಿ ಬಜರಂಗದಳ ಪ್ರಾರಂಭಗೊಂಡಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ನಿರಂತರವಾದ ಹೋರಾಟವನ್ನು ಮಾಡಿಕೊಂಡು ಬಂದಿರುವ ಭಜರಂಗದಳವನ್ನು ಕಾಂಗ್ರೆಸ್ ನಿಷೇಧಿಸಲು ಹೊರಟಿದೆ. ಬಜರಂಗದಳವೆಂದರೆ ಗಲಾಟೆ ಮಾಡುವ ಸಂಘಟನೆ ಎನ್ನುವ ತಪ್ಪು ಅಭಿಪ್ರಾಯ ಇದೆ. ಆದರೆ ಇದು ನೂರಕ್ಕೆ ನೂರು ಸುಳ್ಳು. ಹಿಂದೂ ಧರ್ಮ ರಕ್ಷಣೆಯನ್ನು ಮಾಡಲು ಸರಕಾರ ಹಿಂಜರಿದಾಗ ಧರ್ಮ ರಕ್ಷಿಸಲು ಹುಟ್ಟಿಕೊಂಡದ್ದು ಬಜರಂಗದಳ ಎಂದು ತಿಳಿಸಿದರು. ದೇವಸ್ಥಾನಗಳ ಜೀಣೋದ್ಧಾರ ಕಾರ್ಯಗಳಲ್ಲಿ ಸೇವೆಯ ರೂಪದಲಿ ಬಜರಂಗದಳ ತೊಡಗಿಸಿಕೊಂಡಿದೆ. ಕರೋನಾ ಸಂದರ್ಭದಲ್ಲಿ ಶವ ಸಮಸ್ಕಾರ ಮಾಡುವಂತಹ ಶ್ರೇಷ್ಠ ಕಾರ್ಯವನ್ನು ಮಾಡಿದೆ, ಬಡವರಿಗಾಗಿ ಉಚಿತ ಅಂಬ್ಯಲೆನ್ಸ್ ಸೇವೆಯನ್ನು ನೀಡಿದೆ, ಪ್ರವಾಹ, ಭೂ ಕುಸಿತ ಉಂಟಾದಾಗ ಭಜರಂಗದಳದ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ಸೇವೆ ನೀಡಿದ್ದಾರೆ, ಇದು ಸಮಾಜ ದ್ರೋಹದ ಸಂಘಟನೆಯಲ್ಲ, ಕಷ್ಟಗಳು ಬಂದಾಗ ಸ್ಪಂದನೆ ಮಾಡುವ, ದೇಶದ ಅಸ್ಮಿತೆಯ ಪ್ರಶ್ನೆ ಬಂದಾಗ ಸಮಾಜವನ್ನು ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳುವ, ಕಾನೂನು ದುರ್ಬಲ ಇದ್ದಾಗ ಸಮಾಜದಲ್ಲಿ ಗೋವುಗಳ ರಕ್ಷಣೆ ಮಾಡುವ, ಹೆಣ್ಣಮಕ್ಕಳನ್ನು ವಿವಿಧ ಕಾರಣಗಳಿಗೆ ಮತಾಂತರ ಮಾಡುವ ಕಾರ್ಯ ಆದಾಗ ಹೋರಾಟ ಮಾಡಿದ ಸಂಘಟನೆ ಬಜರಂಗದಳ ಎಂದು ವಿವರಿಸಿದರು.
ಸೇವೆ, ಸುರಕ್ಷಾ, ಸಂಸ್ಕಾರದ ಮೂಲಕ ದೇಶ ರಕ್ಷಣ ಮಾಡುವ ಬಜರಂಗದಳವನ್ನು ನಿಷೇಧ ಮಾಡುವವರನ್ನು ಸಮಾಜ ನಿಷೇಧ ಮಾಡುತ್ತದೆ. ಹನುಮಂತನ ಬಾಲಕ್ಕೆ ಕಾಂಗ್ರಸ್ ಬೆಂಕಿ ಹಚ್ಚಿದೆ, ಈ ಮೂಲಕ ಕಾಂಗ್ರೆಸ್ ಸಾಮ್ರಾಜ್ಯ ನಾಶವಾಗಲಿದೆ ಎಂದ ಅವರು ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಪುತ್ತೂರು ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಸಂಘಟನೆಯ ಪ್ರಮುಖರಾದ ಸುರೇಶ್ ಬೆಂಜನಪದವು, ಚಂದ್ರ ಕಲಾಯಿ, ಸಂತೋಷ್ ಸರಪಾಡಿ ಉಪಸ್ಥಿತರಿದರು.