ಬಂಟ್ವಾಳ : ಅಂಬಾನಿ, ಅದಾನಿಯಂತಹ ಶ್ರೀಮಂತರಿಗೆ ಅಚ್ಛೇದಿನ್ ಬಂದಿದೆಯೇ ಹೊರತು, ಬಡವರಿಗೆ ಅಚ್ಛೇದಿನ್ ಬಂದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಕಕ್ಯಪದವಿನಲ್ಲಿ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಜೆಪಿಗರು ಲೇವಡಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಉಚಿತ ಅಕ್ಕಿ ಕೊಟ್ಟಾಗ ಇಂತಹುದೇ ಮಾತುಗಳನ್ನಾಡುತ್ತಿದ್ದರು. ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗ, ಈ ಅಕ್ಕಿಯಲ್ಲಿ ಕೇಂದ್ರದ ಪಾಲಿದೆ ಎನ್ನುತ್ತಿದ್ದರು ಎಂದು ರೈ ಸ್ಮರಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳು ಬೋಗಸ್ ಎಂದು ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಬಡವರಿಗೆ ಏಳು ಕೆಜಿ ಅಕ್ಕಿ ಕೊಟ್ಟದ್ದು ಕಾಂಗ್ರೆಸ್. ರೈತರಿಗೆ ಉಚಿತ ವಿದ್ಯುತ್ ಅನ್ನು ಈಗಾಗಲೇ ನೀಡಲಾಗುತ್ತಿದೆ.
ಇವತ್ತು ರೈತರು ಉಚಿತವಾಗಿ ವಿದ್ಯುತ್ ಪಡೆದು ಹಲವು ಪಂಪ್ ಗಳನ್ನು ಅಳವಡಿಸಿ ತಮ್ಮ ತೋಟಗಳಿಗೆ ನೀರು ಹರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ಸರಕಾರ ಕಾರಣ. ಇದು ಸಾಧ್ಯವಿರುವಾಗ ಬಡವರಿಗೆ 200 ಯೂನಿಟ್ ಉಚಿತವಾಗಿ ಕೊಡುವುದಕ್ಕೆ ಯಾಕೆ ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಖಚಿತವಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆದರೆ, ಈ ಹಿಂದೆ ಬಿಜೆಪಿಗರು ನೀಡಿದ್ದ ಎಲ್ಲಾ ಭರವಸೆಗಳು ವಿಫಲವಾಗಿವೆ. ವಿದೇಶದಿಂದ ಕಪ್ಪು ಹಣ ತಂದು ಬಡವರಿಗೆ 15 ಲಕ್ಷ ಹಂಚುತ್ತೇವೆ ಎಂದಿದ್ದರು. ನಿರುದ್ಯೋಗಿಗಳಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ, ಇವ್ಯಾವುದೂ ಜಾರಿಯಾಗಿಲ್ಲ. ಬಿಜೆಪಿ ಭರವಸೆಗಳೇ ಬೋಗಸ್ ಆಗಿದ್ದು, ಕಾಂಗ್ರೆಸ್ ಯೋಜನೆಗಳು ಯಾವತ್ತೂ ಬೋಗಸ್ ಆಗಿಲ್ಲ. ಕಾಂಗ್ರೆಸ್ ಯಾವಾಗಲೂ ನುಡಿದಂತೆ ನಡೆದ ಪಕ್ಷ, ಬಿಜೆಪಿ ನುಡಿದಂತೆ ನಡೆಯದ ವಚನಭ್ರಷ್ಟ ಪಕ್ಷ ಎಂದು ರೈ ಅಭಿಪ್ರಾಯಪಟ್ಟರು.
ಖ್ಯಾತ ನ್ಯಾಯವಾದಿ, ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ರೈ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರುಗಳಾದ ಬಿ.ಎಚ್. ಖಾದರ್, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಚೆನ್ನಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್, ಅಬ್ದುಲ್ ರಹಿಮಾನ್, ವಾಸುದೇವ ಮಯ್ಯ, ಬೇಬಿ ಕೃಷ್ಣಪ್ಪ, ಜನಾರ್ಧನ ಚೆಂಡ್ತಿಮಾರ್, ಅಣ್ಣು ಖಂಡಿಗ, ನಡುಮನೆ ಪರಮೇಶ್ವರ ಸಾಲ್ಯಾನ್, ಧರ್ಣಪ್ಪ ಪೂಜಾರಿ, ರಕ್ಷಿತಾ, ಶಾಂತಾ ಮತ್ತಿತರರು ಉಪಸ್ಥಿತರಿದ್ದರು.