ಬಂಟ್ವಾಳ: ಉಚಿತ ಕೊಡುಗೆಯಿಂದ ಸ್ವಾಭಿಮಾನಿ ಭಾರತ ಕಟ್ಟಲು ಸಾಧ್ಯವಿಲ್ಲ. ಇದರಿಂದ ಶ್ರೀಲಂಕಾ ಪಾಕಿಸ್ತಾನದ ಪರಿಸ್ಥಿತಿ ಕರ್ನಾಟಕಕ್ಕೂ ಬರಲು ಸಾಧ್ಯವಿದೆ. ಬಿಜೆಪಿ ಬಂಟ್ವಾಳವನ್ನು ಜಿಲ್ಲೆಯ ಮಾದರಿ ಕ್ಷೇತ್ರವನ್ನಾಗಿ ಮಾಡಿದೆ, ಇಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಕೇಳುತ್ತಿಲ್ಲ, ಬದಲಾಗಿ ಕುಕ್ಕರ್ ಧ್ವನಿ ಮಾತ್ರ ಕೇಳುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಆರೋಪಿಸಿದರು.
ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಅಧಿಕಾರವಧಿಯಲ್ಲಿ ಶಾಂತಿ ಕದಡಿವರು ಬಿಜೆಪಿಯವರಲ್ಲ, ಕಾಂಗ್ರೆಸ್ಸಿಗರು ಹಾಗೂ ರಮನಾಥ ರೈಯವರ ರಾಜಕೀಯ ಚಿಂತನೆಯ ಪ್ರಭಾವದಿಂದಾಗಿ ಗಲಭೆಗಳು ಉಂಟಾಗಿದೆ. ಕೋಮುಗಲಭೆ, ಗೋಹತ್ಯೆ, ಹಿಂದೂ ಮುಸ್ಲಿಂ ಘರ್ಷಣೆ, ಹಿಂದೂ ಯುವಕರ ಮೇಲೆ ಕೇಸ್, ಜನಾರ್ದನ ಪೂಜಾರಿಯವರನ್ನು ನಿಂದಿಸಿ, ಅವರಲ್ಲಿ ಕಣ್ಣೀರಾಕಿಸಿದ ಹಿಂದಿನ ಹಸ್ತ ಯಾವುದು? ಎಂದು ಪ್ರಶ್ನಿಸಿದರು. ನಿಮಗೆ ಇಂದಿಗೂ ಬಂಟ್ವಾಳದ ಜನರ ನಾಡಿ ಮಿಡಿತ ಅರ್ಥ ಆಗಿಲ್ಲ, ಅರ್ಥ ಆಗುತ್ತಿದ್ದರೆ ಇದು ನನ್ನ ಕಡೆಯ ಚುನಾವಣೆ ಎಂದು ಜನರಲ್ಲಿ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನೂ ನಿಮಗೆ ಅಧಿಕಾರದ ಮೇಲೆ ಆಸೆ ಇದೆ. ಬಿಜೆಪಿಗೆ ಬಂಟ್ವಾಳವನ್ನು ಅಭಿವೃದ್ದಿ ಪಡಿಸಬೇಕು, ಸಾಮರಸ್ಯದ ಬಂಟ್ವಾಳವಾಗಿ ರೂಪಿಸುವ ಕನಸಿದೆ, ಕಾಂಗ್ರೆಸ್ಗೆ ಭ್ರಷ್ಠಾಚಾರದ ಬಲ ಇದ್ದರೆ ಬಿಜೆಪಿಗೆ ಹಿಂದುತ್ವದ ಬಲ ಇದೆ, ಕಾಂಗ್ರೆಸ್ಗೆ ನೆಹರು ಕುಟುಂಬದ ಮೇಲೆ ಭಕ್ತಿ ಇದ್ದರೆ ಬಿಜೆಪಿಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಆಗಬೇಕೆನ್ನುವ ಭಕ್ತಿ ಇದೆ, ಕಾಂಗ್ರೆಸ್ಗೆ ದೇಶ ವಿಭಜನೆಯ ಕಳಂಕ ಇದ್ದರೆ ಬಿಜೆಪಿಗೆ ದೇಶವನ್ನು ಒಗ್ಗೂಡಿಸುವ ಪುಳಕ ಇದೆ ಎಂದರು.
ಕಾಂಗ್ರೆಸ್ ಭವನ ಉದ್ಘಾಟನೆಗೆ ಜನಾರ್ದನ ಪೂಜಾರಿಯವರನ್ನು ಆಹ್ವಾನಿಸಿಲ್ಲ, ಪ್ರಜಾಧ್ವನಿ ಯಾತ್ರೆಯಲ್ಲಿ ಜನಾರ್ದನ ಪೂಜಾರಿ ಭಾವಚಿತ್ರವನ್ನು ಎಲ್ಲಿಯೂ ಹಾಕಿಲ್ಲ, ನಿಮ್ಮ ಅವಧಿಯಲ್ಲಿ ೧೨೦೦ ಕೋಟಿ ರೂ. ಅನುದಾನ ತಂದಿರುವುದಾಗಿ ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದೀರಿ, ಈ ಬಗ್ಗೆ ಫ್ಲೆಕ್ಸ್ ಹಾಕಿಸಿದ್ದೀರಿ, ಈಗ ೫ ಸಾವಿರ ಕೋಟಿ ರೂಪಾಯಿ ಅನುದಾನ ತಂದಿರುವುದಾಗಿ ಸುಳ್ಳನ್ನು ಹೇಳುತ್ತೀರಿ, ಹಾಗಾದರೆ ಉಳಿದ ೪ ಸಾವಿರ ಕೋಟಿ ಎಲ್ಲಿಗೆ ಹೋಯಿತು? ಎನ್ನುವುದನ್ನು ಹೇಳಬೇಕು ಎಂದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಂಗ್ರೆಸ್ ಗೆದ್ದಿರುವ ರಾಜ್ಯಗಳಲ್ಲಿ ನೀಡಲು ಸಾಧ್ಯವಾಗಿಲ್ಲ, ಇದೀಗ ಕರ್ನಾಟಕವನ್ನು ದಿವಾಳಿಯನ್ನಾಗಿಸುವ, ಆರ್ಥಿಕತೆಯ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯುತ್ತಿದೆ. ಭ್ರಷ್ಠಾಚಾರ ಕಾಂಗ್ರೆಸ್ನ ಬುನಾದಿ ಎಂದು ಟೀಕಿಸಿದರು.
ಹಿಂದೂ ಬಿಲ್ಲವ ರಾಮನ ಅನುಯಾಯಿ ಆಗುತ್ತಾನೆಯೇ ಹೊರತು ರಾವಣನ ಅನುಯಾಯಿಯಾಗುವುದಿಲ್ಲ, ಕೋಟಿ ಚೆನ್ನಯರ ಅನುಯಾಯಿಯಾಗುತ್ತಾನೆಯೇ ಹೊರತು ಚಂದುಗಿಡಿಯ ಅನುಯಾಯಿಯಾಗುವುದಿಲ್ಲ, ನರೇಂದ್ರ ಮೋದಿಯ ಅನುಯಾಯಿಯಾಗುತ್ತಾನೆಯೇ ಹೊರತು ನಕಲಿ ಗಾಂಧಿಯ ಅನುಯಾಯಿ ಆಗುವುದಿಲ್ಲ ಎಂದರು. ಮೇ.೬ ರಂದು ಬಂಟ್ವಾಳಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸಲಿದ್ದು ಪೊಳಲಿ ದ್ವಾರದಿಂದ ನಾರಾಯಣ ಗುರು ವೃತ್ತದ ವರೆಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪ್ರಮುಖರಾದ ಸಂತೋಷ್ ಕುಮಾರ್ ರೈ, ಬೋಳಿಯಾರ್, ಡೊಂಬಯ ಅರಳ, ಹರಿದಾಸ್, ಪುರುಷೋತ್ತಮ ಶೆಟ್ಟಿ ವಾಮದಪದವು, ರಂಜಿತ್ ಮೈರ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
—