ಬಂಟ್ವಾಳ : ರಾಜ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ ಎಂಬ ಮಾತಿದೆ. ಅದೇ ರೀತಿ ಇವತ್ತು ಉದ್ಯಮಿಗಳು ಜನಪ್ರತಿನಿಧಿಗಳಾಗುತ್ತಿರುವುದರಿಂದ ಅವರು ಎಲ್ಲವನ್ನೂ ಲಾಭದ ಸೃಷ್ಟಿಯಿಂದ ನೋಡುತ್ತಿದ್ದಾರೆ. ಜನಸೇವೆಗಿಂತ ಭ್ರಷ್ಟಾಚಾರ ಎಸಗುವುದಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದು ಜನತೆಯನ್ನು ತೀರಾ ಸಂಕಷ್ಟಕ್ಕೀಡು ಮಾಡಿದೆ. ಆದರೆ ನಾನು ಜನಸೇವೆಗಾಗಿಯೇ ಬದುಕಿದವನು. ಶಾಸಕ, ಸಚಿವನಾದರೂ ನಗರಗಳಲ್ಲಿ ದೊಡ್ಡ ಬಂಗಲೆ ಕಟ್ಟಿಲ್ಲ. ನನ್ನ ಹಿರಿಯರು ಕೊಟ್ಟ ಮನೆಯಲ್ಲೇ ವಾಸಿಸುತ್ತಿದ್ದೇನೆ ಮತ್ತು ಅಲ್ಲಿಂದಲೇ ಜನಸೇವೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ನಾವೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಆಡಳಿತದಲ್ಲಿ ಪ್ರತಿಯೊಂದು ವಿಚಾರಕ್ಕೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅವರ ಪಕ್ಷಗಳ ಮುಖಂಡರುಗಳೇ ಆಪಾದಿಸಿದ್ದಾರೆ. ಇಂತಹ ಭ್ರಷ್ಟ ಸರಕಾರ ಕಿತ್ತೆಸೆಯದೆ ಜನರಿಗೆ ನೆಮ್ಮದಿಯ ಜೀವನ ಮರಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ ಐದು ವರ್ಷದಲ್ಲಿ ಬಿಜೆಪಿಗರ ಕೆಲಸಗಳನ್ನು ತುಲನೆ ಮಾಡಿ ಈ ಬಾರಿ ಮತ ನೀಡಿ ಎಂದು ಅವರು ವಿನಂತಿಸಿದರು. ಬಂಟ್ವಾಳದಲ್ಲಿ ಆಗಿರುವ ಬಹುತೇಕ ಸರಕಾರಿ ಕಟ್ಟಡಗಳು ನನ್ನ ಅವಧಿಯಲ್ಲಿ ಆಗಿರುವಂತದ್ದು. ಕ್ಷೇತ್ರದ ಮೂಲೆ ಮೂಲೆಯಲ್ಲಿ ರಸ್ತೆಗಳು ನನ್ನ ಅವಧಿಯಲ್ಲಿಯೇ ಅಭಿವೃದ್ಧಿಯಾಗಿವೆ. ಆದರೆ, ಈಗ ರಸ್ತೆಯ ಒಂದು ತುದಿಗೆ ಸ್ವಲ್ಪ ಕಾಂಕ್ರೀಟ್ ಹಾಕಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಹಾಕುವುದನ್ನು ನೋಡುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಂಟ್ವಾಳದ ಅಭಿವೃದ್ಧಿಯಲ್ಲಿ ಅವಿರತ ಶ್ರಮಿಸಿದ ರೈಗಳನ್ನು ನಾವು ಈ ಬಾರಿ ಅತ್ಯಂತ ಶ್ರಮಪಟ್ಟು ಗೆಲ್ಲಿಸಬೇಕು. ಅವರು ಗೆದ್ದರೆ ಬಡವರು, ಅಸಹಾಯಕರಿಗೆ ಬಲ ಬಂದಂತೆ. ಬಂಟ್ವಾಳದ ಅಭಿವೃದ್ಧಿಗೆ ಅವರು ಕಂಡ ಕನಸುಗಳು ಪೂರ್ಣಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಈ ವೇಳೆ ಮಾತನಾಡಿದ ನ್ಯಾಯವಾದಿ ಸುರೇಶ್ ನಾವೂರು ಮನವಿ ಮಾಡಿದರು.
ಬಿಜೆಪಿಯ ಆಡಳಿತಕ್ಕೆ ಬೇಸತ್ತು ದೇವಪ್ಪ ಕುಲಾಲ್, ಸೀತಾರಾಮ್ ಕುಲಾಲ್, ಪ್ರವೀಣ್ ಕುಲಾಲ್ ಇದೇ ವೇಳೆ ಕಾಂಗ್ರೆಸ್ ಸೇರ್ಪಡೆಯಾದರು. ದೇವಸ್ಯಪಡೂರು ಗ್ರಾಮದ ಸಂತೋಷ ಕರ್ಕೇರ ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಕೆಪಿಸಿಸಿ ಮುಖಂಡರುಗಳಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಇಬ್ರಾಹಿಂ ಕೈಲಾರ, ಉಮೇಶ್ ಕುಲಾಲ್, ಲವೀನಾ ವಿಲ್ಮಾ ಮೊರಾಸ್, ಲವೀನಾ ಶಾಂತಿ ಡಿಸೋಜಾ, ಎಂ. ಮೊಹಮ್ಮದ್, ಫಾರೂಕ್, ಯೋಗೀಶ್, ಸುವರ್ಣ ಕುಮಾರ್ ಜೈನ್, ತ್ರಿಶಾಲಾ ಸುವರ್ಣ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
—