ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ದಕ್ಷತೆಯ ನಾಯಕತ್ವವನ್ನು ಮೆಚ್ಚಿ ಸಮಾಜ ಸೇವಕರು, ಸಾಮಾಜಿಕ ಚಿಂತಕರುಗಳಾದ ಗುಬ್ಯಮೇಗಿನ ಗುತ್ತಿನ ಶ್ರೀಧರ ಕೆ. ಶೆಟ್ಟಿ ಮತ್ತು ಪಟ್ಲಗುತ್ತಿನ ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾದರು.
ರಮಾನಾಥ ರೈ ಅವರ ಸಮ್ಮುಖದಲ್ಲಿ ಬಿ.ಸಿ.ರೋಡ್ ನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಶ್ರೀಧರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಉದ್ದೇಶವಿದೆ. ಕ್ಷೇತ್ರದ ಜನತೆಯ ಮನವೊಲಿಸಿ ರೈಯವರ ವಿಜಯ ಪತಾಕೆ ಮತ್ತೊಮ್ಮೆ ಹಾರುವಂತೆ ಮಾಡಬೇಕು ಎಂದು ಶ್ರೀಧರ ಶೆಟ್ಟಿ ಹೇಳಿದರು. ರೈಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಜನತೆ ಮತದಾನ ಮಾಡಬೇಕು. ಅವರಂತಹ ದೂರದೃಷ್ಟಿಯುಳ್ಳ ನಾಯಕರು ನಮಗೆ ನಾಯಕರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ದಾಮೋದರ ಶೆಟ್ಟಿ ತಿಳಿಸಿದರು.
ಈ ವೇಳೆ ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಖಂಡಿಗ, ಯುವ ಕಾಂಗ್ರೆಸ್ ನ ಅಲ್ತಾಫ್ ಸಂಗಬೆಟ್ಟು, ಚುನಾವಣಾ ಕಚೇರಿ ಉಸ್ತುವಾರಿಗಳಾದ ನಾರಾಯಣ ನಾಯ್ಕ್, ಪರಮೇಶ್ವರ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.