ಬಂಟ್ವಾಳ: ಬಿಎಲ್ಒ ಆಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಬಂಟ್ವಾಳ
ತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕಾರ್ಯಕರ್ತೆ ಲತಾ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶವನ್ನು ರದ್ದು ಪಡಿಸಿ ಅವರನ್ನು ಮತ್ತೆ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವಾರದ ಗಡುವು ನೀಡಿದೆ.
ಅಂಗನವಾಡಿ ಕಾರ್ಯಕರ್ತೆ ಲತಾ ಅವರಿಗೆ ಉದೇಶಪೂರ್ವಕವಾಗಿ ಆಗಿರುವ ಅನ್ಯಾಯದ ವಿರುದ್ದ ರಾಜ್ಯ ಹಾಗೂ ಜಿಲ್ಲಾ ಸಂಘಟನೆಯೂ ಬೆಂಬಲ ವ್ಯಕ್ಯಪಡಿಸಿದ್ದು ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ವಾರದೊಳಗಾಗಿ ಅಮಾನತು ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ರಾಜ್ಯದಲ್ಲಿ ಬಿಎಲ್ಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್ಓ ಹುದ್ದೆಗೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಅವರು ಮಾಹಿತಿ ನೀಡಿ ಲತಾ ಅವರು ಬಿಎಲ್ ಒ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿರುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಲಿಖಿತವಾಗಿ ಮತ್ತು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿದ್ದರೂ, ಜಿಲ್ಲಾಧಿಕಾರಿಯವರು ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಸಾಕಷ್ಟು ಕೆಲಸಗಳಿದ್ದು, ಬಿಎಲ್ಒ ಹುದ್ದೆ ನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕೆಂದು ಹಲವು ಬಾರಿ ಮನವಿ ಮಾಡಲಾಗಿತ್ತಾದರೂ ಕೆಲ ಅಧಿಕಾರಿಗಳು ತಮ್ಮ ಸ್ವಪ್ರತಿಷ್ಠೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ ಹೇರುವುದರ ಜೊತೆಗೆ ತಮ್ಮ ಮೇಲಾಧಿಕಾರಿಯವರಿಗೆ ತಪ್ಪು ಮಾಹಿತಿಯನ್ನು ನೀಡಿ ಅಮಾನತಿಗೆ ಪ್ರೆರೇಪಿಸುತ್ತಾರೆ. ಇಲ್ಲಿ ಲತಾ ಅವರು ಕೂಡ ಬಂಟ್ವಾಳ ತಹಶೀಲ್ದಾರರಿಗೆ, ಸಿಡಿಪಿಒ ಅವರ ಮೂಲಕ ಹಾಗೂ ಖುದ್ದಾಗಿ ವಿವರಣೆ ನೀಡಿದರೂ ಅವರನ್ನು ಅಮಾನತು ಮಾಡಿರುವುದರ ಹಿಂದೆ ಇಲ್ಲಿನ ಕೆಲ ಅಧಿಕಾರಿಗಳ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಸಂಘದ ಮೂಲಕ ಮಂಗಳವಾರವೇ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದಾಖಲೆ ಸಹಿತ ಅವರಿಗೆ ವಿವರಣೆ ನೀಡಿ ಬಡಪಾಯಿ ಲತಾ ಅವರ ಅಮಾನತು ಆದೇಶ ವಾಪಾಸ್ ಪಡೆದು ಹುದ್ದೆಯಲ್ಲಿ ಮುಂದುವರಿಸಲು ಒತ್ರಾಯಿಸಲಾಗುವುದು ಅಲ್ಲದೆ ಈಗಾಗಲೇ ಸಿಡಿಪಿಒ, ಡಿ.ಡಿ ಹಾಗೂ ನಿರೂಪಣಾಧಿಕಾರಿಯವರನ್ನು ಭೇಟಿಯಾಗಿ ಚರ್ಚಿಸಿದ್ದು, ಲತಾ ಅವರಿಗಾದ ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ತಿಳಿಸಿದರು.
ಇಲಾಖಾ ಆದೇಶಕ್ಕೆ ಬೆಲೆ ಇಲ್ಲ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಅಂಗನವಾಡಿ ಕೆಲಸ ಕಾರ್ಯಗಳು, ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಗೆ ಸಂಬಂಧಿಸಿದ ಕರ್ತವ್ಯಗಳು, ಗರ್ಭಿಣಿ ಬಾಣಾಂತಿಯರ ಮನೆ ಭೇಟಿ, ಪೌಷ್ಠಿಕ ಆಹಾರ ತಯಾರಿಕೆ, ಮಾತೃವಂದನಾ, ಭಾಗ್ಯಲಕ್ಷ್ಮೀ ಯೋಜನೆ ಮುಂತಾದ ಹಲವು ಕೆಲಸ ಕಾರ್ಯಗಳ ಒತ್ತಡಗಳ ಬಗ್ಗೆ ವಿವರಿಸಿ ಬಿಎಲ್ಓ ಹುದ್ದೆಯಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕೆಂದು ಕೋರಿಕೆ ಸಲ್ಲಿಸಿದ್ದರು. ಇದರನ್ವಯ ಸಕಾರದ ಜಂಟಿ ಚುನಾವಣಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರುಗಳಿಗೆ ನಿರ್ದೇಶನ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರ ನೋಂದಾವಣಾಧಿಕಾರಿಯವರು ಬಿಎಲ್ಓ ಹುದ್ದೆಯಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಆದರೆ ಬಂಟ್ವಾಳ ತಾಲೂಕಿನ ತಹಸೀಲ್ದಾರ್ ಹಾಗೂ ಅಧಿಕಾರಿಗಳು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ ಹೇರುತ್ತಿದ್ದಾರೆ, ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅಮಾನತು ಆದೇಶಗಳಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯಶ್ರೀ, ಸುಲೋಚನಾ, ರೇಣುಕಾ, ಭಾರತಿ ಲತಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.