ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದ್ದು ಊರಪರವೂರ ಭಕ್ತ ಜನತೆ ಹಾಗೂ ಕುಮಾರ-ಸಿರಿ ಆರಾಧಕರ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಯಾಗಿದೆ. 2023ರ ಎಪ್ರಿಲ್ 27ರಿಂದ 29ರ ತನಕ ಬ್ರಹ್ಮಕಲಶೋತ್ಸವವು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದ್ದು ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ.
ಅಭಿವೃದ್ಧಿ ಯೋಜನೆಗಳು:
ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಶ್ರೀ ನಾಗದೇವರು, ಶ್ರೀ ರಕ್ತೇಶ್ವರೀ, ಶ್ರೀ ನಂದಿಗೋಣ, ಕುಮಾರ, ಸಿರಿ, ಅಬ್ಬಗ-ದಾರಗ ಶಕ್ತಿಗಳಿಗೆ ನೂತನ ಸಾನ್ನಿಧ್ಯಗಳ ಪುನರ್ ನಿರ್ಮಾಣ, ಸುತ್ತುಪೌಳಿ-ಮುಖಮಂಟಪ-ಪ್ರವೇಶ ಧ್ವಾರ-ಮೇಲ್ಛಾವಣಿ-ಶೌಚಾಲಯ-ಕಚೇರಿ ಮತ್ತು ಪಾಕಸಾಲೆಗಳ ನಿರ್ಮಾಣ, ಅಂಗಣಕ್ಕೆ ಗ್ರಾನೈಟ್ ಅಳವಡಿಕೆ ಸಹಿತ ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಜೀಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರಮದಾನದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಿರಂತರ 48 ದಿನಗಳ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಕ್ಷೇತ್ರದ ಹಿನ್ನೆಲೆ:
ಬಂಟ್ವಾಳ ತಾಲೂಕಿನ ಏಕೈಕ ಆಲಡೆ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ಸಿರಿಗುಂಡದಪಾಡಿಯು ಕುಮಾರ-ಸಿರಿಗಳ ಐತಿಹ್ಯ ಹೊಂದಿರುವ ಪ್ರದೇಶವಾಗಿದ್ದು ಹಿಂದೆ ವೈಭವದಿಂದ ಮೆರೆದು ಕಾರಣೀಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರವಾಗಿದೆ. ತುಳುನಾಡಿನ ಆದಿದೈವ ‘ಬೆರ್ಮರು’ ಇಲ್ಲಿನ ಪ್ರಧಾನ ಆರಾಧನಾ ಶಕ್ತಿಯಾಗಿದ್ದು, ಪ್ರಸ್ತುತ ಈ ಆಲಡೆ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ, ನಾಗದೇವರು, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಕುಮಾರ, ಸಿರಿ, ಅಬ್ಬಗ-ದಾರಗ, ಬೈಲಾಂಡಿ ಪಂಜುರ್ಲಿ ಹಾಗೂ ಶ್ರೀ ಮಹಾಮ್ಮಾಯಿ ಅಮ್ಮನವರ ಸಾನ್ನಿಧ್ಯಗಳಿವೆ.
ಸಿರಿಗುಂಡದಪಾಡಿಯಲ್ಲಿ ಸಿರಿಗಳು ಉದ್ಭವವಾಗಿ ಪಾಡಿಯ ಪಕ್ಕದಲ್ಲಿರುವ ಬೈಲಿನಲ್ಲಿರುವ ಗುಂಡಿಯಲ್ಲಿ ಸ್ನಾನ ಮಾಡಿದರಂತೆ, ಸ್ನಾನ ಮಾಡಿದ ಅಬ್ಬಗ-ದಾರಗರು ಎತ್ತರದ ದಿನ್ನೆಯ ಮೇಲೆ ಕುಳಿತು ವೀಳ್ಯದೆಲೆ ತಿಂದರಂತೆ, ಇದರ ಪಕ್ಕದಲ್ಲಿರುವ ಪಾದೆಯಲ್ಲಿ ಚೆನ್ನಮಣೆ ಆಡಲು ಅನುಕೂಲವಾಗುವಂತಹ ಪುಟ್ಟ ಗುಂಡಿಗಳನ್ನು ನಿರ್ಮಿಸಿ ಅದರಲ್ಲಿ ಅಬ್ಬಗ-ದಾರಗರು ಚೆನ್ನಮಣೆಯನ್ನು ಆಡಿದರು ಎನ್ನುವ ಪ್ರತೀತಿ ಇದ್ದು, ಇದಕ್ಕೆ ಪೂರಕವಾದ ಕುರುಹುಗಳು ಈಗಲೂ ಈ ಪರಿಸರದಲ್ಲಿ ಕಾಣಸಿಗುತ್ತವೆ.
ಬೈಲಿನಲ್ಲಿರುವ ಸಿರಿಗಳ ಗುಂಡಿಯಿಂದಾಗಿ ‘ಗುಂಡಿದಪಾಡಿ’ ಎಂಬುದಾಗಿ, ಕಾಲಕ್ರಮೇಣ ‘ಗುಂಡದಪಾಡಿ’ ಎಂದಾಗಿರಬಹುದು, ಜತೆಯಲ್ಲಿ ಸಿರಿಗಳ ಸಾನಿಧ್ಯ ಮತ್ತು ಬೆರ್ಮರ ಗುಂಡ ಇದ್ದುದರಿಂದ ಪಾಡಿಯಂತಿರುವ ಈ ಪ್ರದೇಶವು ‘ಸಿರಿಗುಂಡದಪಾಡಿ’ ಎಂದು ಕರೆಯಲ್ಪಟ್ಟಿರಬಹುದು ಎನ್ನುವುದು ಇತಿಹಾಸ ಸಂಶೋಧಕರ ಅಭಿಪ್ರಾಯವಾಗಿದೆ. ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನಕ್ಕೂ ಸಿರಿಗುಂಡದಪಾಡಿಗೂ ಸಂಬಂಧವಿದ್ದು ಹಿಂದೆ ಕುಮಾರ ಸಿರಿಗಳು ಕಜೆಕೋಡಿಗೆ ಬಂದಾಗ ಶಿವನು ‘ನಿಮಗೆ ಇಲ್ಲಿ ಸ್ಥಾನವಿಲ್ಲ’ವೆಂದು ಶ್ರೀ ವೀರಭದ್ರ ಸ್ವಾಮಿಯೊಂದಿಗೆ ಕುಮಾರ ಸಿರಿ ಶಕ್ತಿಗಳನ್ನು ‘ಸಿರಿಗುಂಡದಪಾಡಿ’ಗೆ ಕಳುಹಿಸಿ ನೆಲೆಯಾಗಿಸಿದನು ಎಂಬ ಅಂಶವು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.
ಸಂತಾನ ಭಾಗ್ಯ ಇಲ್ಲದವರು, ಅನಾರೋಗ್ಯ ಪೀಡಿತರು, ವಿವಿಧ ರೀತಿಯಲ್ಲಿ ಸಂಕಷ್ಟಕ್ಕೀಡಾದವರು ಇಲ್ಲಿಯ ಪ್ರಸಾದ ಸ್ವೀಕರಿಸಿ ಇಷ್ಠಾರ್ಥವನ್ನು ಈಡೇರಿಸಿಕೊಂಡ ಸಾಕಷ್ಟು ನಿದರ್ಶನಗಳಿದೆ. ಈ ಕ್ಷೇತ್ರಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಕಾಲಕ್ರಮೇಣ ಕಾಲಗರ್ಭದ ಸುಳಿಗೆ ಸಿಕ್ಕಿ ಕ್ಷೇತ್ರವು ಶಿಥಿಲಾವಸ್ಥೆಗೆ ತಲುಪಿ, ಉತ್ಸವಾದಿಗಳು ನಿಂತು ಹೋಗಿತ್ತು. ಶಿಥಿಲಾವಸ್ಥೆಯಲ್ಲಿದ್ದ ಈ ಆಲಡೆಯಲ್ಲಿ 2000ನೇ ಇಸವಿಯಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ಕೈಗೊಂಡು 2002ರ ಏಪ್ರಿಲ್ ತಿಂಗಳಿನಲ್ಲಿ ಪುನರ್ಪ್ರತಿಷ್ಠಾ ಬ್ರಹ್ಮಕಲಶವನ್ನು ಊರ ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ವಿಧಿವತ್ತಾಗಿ ನೆರವೇರಿಸಲಾಗಿತ್ತು. ಇದೀಗ ದೇವಸ್ಥಾನವು ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದ್ದು ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ.
ಎಪ್ರಿಲ್ 27ರಿಂದ 29ರವರೆಗೆ ಬ್ರಹ್ಮಕಲಶ ಮತ್ತು ಸಿರಿ ಜಾತ್ರೆಯ ಸಂಭ್ರಮ:
ಎಪ್ರಿಲ್ 27ರಿಂದ 28ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ, ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯರ ನೇತೃತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿಯವರ ಪೌರೋಹಿತ್ಯದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಸಿರಿ ಜಾತ್ರೆಯು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಳ್ಳಲಿದೆ.
ಎ.27ರಂದು ಅಪರಾಹ್ನ 2.30ಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ 4.30ರಿಂದ ನೂತನ ಪ್ರವೇಶ ಧ್ವಾರ ಉದ್ಘಾಟನೆ, ಉಗ್ರಾಣ ಮುಹೂರ್ತ, ನೂತನ ಕಚೇರಿ ಮತ್ತು ಪಾಕಶಾಲೆ ಉದ್ಘಾಟನೆ, ನೂತನ ಮುಖಮಂಟಪ ಉದ್ಘಾಟನೆ, ಸಂಜೆ 7ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸೌರಭ, ರಾತ್ರಿ ಶ್ರೀ ಲಕ್ಷ್ಮೀ ಮಹಿಳಾ ಮಂಡಳಿ ಪಾಂಗಲ್ಪಾಡಿ-ಇರ್ವತ್ತೂರು ಇವರಿಂದ “ಒರ್ಯೊರಿ ಒಂಜೊಂಜಿ ತರ..?” ತುಳು ವಿಭಿನ್ನ ಶೈಲಿಯ ನಾಟಕ ನಡೆಯಲಿದೆ.
ಎ.28ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಉದಯಾಸ್ತ ಭಜನಾ ಸಂಕೀರ್ತಣೆ, ಬೆಳಿಗ್ಗೆ ೭ರಿಂದ ಸುಮೂಹೂರ್ತದಲ್ಲಿ ಶ್ರೀ ನಾಗದೇವರು, ರಕ್ತೇಶ್ವರೀ, ನಂದಿಗೋಣ, ಕುಮಾರ, ಸಿರಿ, ಅಬ್ಬಗ-ದಾರಗ ಪ್ರತಿಷ್ಠೆ, ಸಂಜೆ 7ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಜೆ, 7.30ಕ್ಕೆ ಧಾರ್ಮಿಕ ಸಭೆ, ನಂತರ ಶ್ರೀ ದುರ್ಗಾ ಕಲಾತಂಡ ಪುಗಾರ್ತೆ ಕಲಾವಿದೆರ್ ವಿಟ್ಲ ಮೈರ ಕೇಪು ಇವರಿಂದ “ಕಲ್ಜಿಗದ ಕಾಳಿ ಮಂತ್ರದೇವತೆ” ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ.
ಎ.29ರಂದು ಬೆಳಿಗ್ಗೆ 8ರಿಂದ ಸುಮೂಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಶ್ರೀ ಉಮಾಮಹೇಶ್ವರ ಬ್ರಹ್ಮಲಿಂಗೇಶ್ವರ ಬಾಲ ಭಜನಾ ಮಂಡಳಿ ಸಿರಿಗುಂಡದಪಾಡಿ ಇವರಿಂದ ಕುಣಿತ ಭಜನೆ, ಎಲ್.ಕೆ.ಧರಣ್ ಮಾಣಿ ಮತ್ತು ತಂಡದವರಿಂದ ಭಜನಾ ಸಂಕೀರ್ತಣೆ, ಬೆಳಿಗ್ಗೆ 11ರಿಂದ ಧಾರ್ಮಿಕ ಸಭೆ, ಅಪರಾಹ್ನ 2ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ವೃಥಿ ಸೌಮಿತ್ರಿ” ಯಕ್ಷಗಾನ ತಾಳಮದ್ದಳೆ, ಸಂಜೆ 6.30ಕ್ಕೆ ಕುಮಾರಿ ಸಹನಾ ಎಂ.ಶೆಟ್ಟಿ ನರ್ವಲ್ದಡ್ಡ ಇವರಿಂದ ಭರತನಾಟ್ಯ ವೈಭವ, ರಾತ್ರಿ 7.30ರಿಂದ ಬ್ರಹ್ಮದರ್ಶನ, ಸಿರಿ-ಕುಮಾರ ದರ್ಶನ, ಅಬ್ಬಗ-ದಾರಗ ದರ್ಶನ, ಬೈಲಾಂಡಿ ಪಂಜುರ್ಲಿ ಗಗ್ಗರ ಸೇವೆ, ಮಹಾಮ್ಮಾಯಿ ದರ್ಶನದೊಂದಿಗೆ “ಸಿರಿ ಜಾತ್ರೆ”ಯು ವೈಭವಯುತವಾಗಿ ಸಂಪನ್ನಗೊಳ್ಳಲಿದೆ.
ಮೋಹನ್ ಶೆಟ್ಟಿ ನರ್ವಲ್ದಡ್ದ ಅಧ್ಯಕ್ಷತೆಯ ಆಡಳಿತ ಸಮಿತಿ, ಡಾ.ರಾಮಕೃಷ್ಣ ಎಸ್.ಸನಂಗುಳಿ ಅಧ್ಯಕ್ಷತೆಯ ಜೀರ್ಣೋದ್ಧಾರ ಸಮಿತಿ, ಬೂಬ ಸಪಲ್ಯ ಮುಂಡಬೈಲು ಅಧ್ಯಕ್ಷತೆಯ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ಉಪಸಮಿತಿಗಳ ಸದಸ್ಯರು, ಮಾತೆಯರು ಮತ್ತು ಊರಪರವೂರ ಭಕ್ತಾಭಿಮಾನಿಗಳು ದೇಗುಲದ ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.