ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೩೦ರಂದು ನಡೆಯಲಿರುವ ೧೫ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ವಿವಾಹದ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆಮೈದಾನದ ಸಭಾಂಗಣದಲ್ಲಿ ರವಿವಾರ ನಡೆಯಿತು.
ಲಾಲ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಕೋಶಾಽಕಾರಿ ವಸಂತ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ. ದೀನ ದಲಿತರ ಬದುಕಿಗೆ ಶಕ್ತಿ ತುಂಬುವ ಇಂತಹ ಕಾರ್ಯಕ್ರಮ ಗಳನ್ನು ನಡೆಸುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಭಿನಂದಾರ್ಹರು ಎಂದು ಹೇಳಿದರು.
ಮುತ್ತೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ಅರ್ಚಕ ಹರಿಯಪ್ಪ ಅವರು ಮಾತನಾಡಿ,ಭಾರತೀಯ ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮೇಲ್ವಿಚಾರಕಿ ಅಶ್ವಿನಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ, ಹಿಂದುಳಿದ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಉದ್ಯಮಿ ನಾಗೇಶ್ ಪ್ರಭು ಮೂರ್ಜೆ ಅವರು ಮಂಗಳ ವಸ್ತ್ರ ವಿತರಿಸಿದರು.
ಶ್ರೀ ರಾಮಾಂಜನೇಯ ಭಜನ ಮಂದಿರದ ಅಧ್ಯಕ್ಷ ಶ್ರೀನಿವಾಸ ಅತ್ತಾಜೆ, ಗ್ರಾ.ಪಂ. ಸದಸ್ಯ ಕಾಂತಪ್ಪ ಕರ್ಕೇರ,ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ಅಂದ್ರಳಿಕೆ, ಗಣೇಶ ಮೂಲ್ಯ ಅನಿಲಡೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷರಾದ ಮಾಧವ ಬಂಗೇರ, ರತ್ನಾಕರ ಪಿ.ಎಂ., ಕ್ರೀಡಾ ಸಂಚಾಲಕ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಯಶೋಧರ ಶೆಟ್ಟಿ ದಂಡೆ ಮತ್ತು ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಪರಸ್ಪರ ಬದಲಾಯಿಸಿಕೊಂಡರು. ೯ ಜೋಡಿ ವಧು, ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ವಧು-ವರರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.