ಬಂಟ್ವಾಳ: ಸಂವಿಧಾನ ಶಿಲ್ಪಿ ಡಾ. ಬಾಬ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆಯನ್ನು ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ ದೀಪಪ್ರಜ್ವಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸುಕುಮಾರ್ ಹಾಗೂ ಸಿಆರ್ಪಿ ಚಿನ್ನಸ್ವಾಮಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಶಾಲಾ ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಜನನ, ಬಾಲ್ಯದ ದಿನಗಳು, ಶಿಕ್ಷಣ, ಜೀವನ ಸಾಧನೆಗಳು, ತತ್ವ ಸಿದ್ದಾಂತಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ದತ್ತು ಸ್ವೀಕಾರ ಸಂಸ್ಥೆ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ನ ಕಾರ್ಯದರ್ಶಿ ನವೀನ್ ಎಸ್. ಸೇಸಗುರಿ ವೇದಿಕೆಯಲ್ಲಿದ್ದರು. ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಅನಿತಾ ವಂದಿಸಿದರು. ಉಮಾವತಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಜರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಡಾ. ಅಂಬೇಡ್ಕರ್ ಜೀವನ ಪಾಠ:ಡಾ. ಅಂಬೇಡ್ಕರ್ ಅವರ ಸಾಧನೆ ಹಾಗೂ ತತ್ವಾದರ್ಶಗಳ ಬಗ್ಗೆ ಶನಿವಾರ ಶಾಲೆಯಲ್ಲಿ ಪಾಠದ ಮೂಲಕ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ವಿದ್ಯಾರ್ಥಿಗಳಿಗೆ ಸವಿವರವಾದ ಮಾಹಿತಿ ನೀಡಿದರು. ರಾಷ್ಟ್ರೀಯ ನಾಯಕರುಗಳ ಜನ್ಮದಿನಾಚರಣೆಯ ಮೊದಲ ದಿನ ಅವರ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಮರುದಿನ ಶಾಲೆಯಲ್ಲಿ ಅವರ ಭಾವಚಿತ್ರ ಇಟ್ಟು ಜನ್ಮಾದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಪರಂಪರೆಯನ್ನು ಶಾಲೆಯಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಎಲ್ಲಾ ಮಹಾನ್ ವ್ಯಕ್ತಿಗಳ, ಸಾಧಕರ ಜೀವನ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಮೊದಲ ದಿನ ತಿಳಿಸಿ ಬಳಿಕ ಆಚರಿಸುವುದರಿಂದ ವಿದ್ಯಾರ್ಥಿಗಳಿಗೆ ಆ ವ್ಯಕ್ತಿಗಳ ತತ್ವಾದರ್ಶವನ್ನು ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಜನ್ಮದಿನಾಚರಣೆ ಆಚರಿಸುವುದು ಹೆಚ್ಚು ಅರ್ಥಪೂರ್ಣವೂ ಆಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಮಾಧ್ಯಮದವರಿಗೆ ತಿಳಿಸಿದರು.