ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ರೂ. 92.60 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದರು.
ಸೋಮವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
2003 ನೇ ಆಗೋಸ್ತು ತಿಂಗಳಲ್ಲಿ ಬಂಟ್ವಾಳ ನಗರದ ಬೈಪಾಸ್ ಪ್ರದೇಶದ ಸುಮಾರು 20 ಜನ ಚಿಕ್ಕ ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿದ್ದ, ಸಮಾನ ಮನಸ್ಕರಿಂದ ಪ್ರವರ್ತಿತವಾದ ಈ ಸಂಸ್ಥೆ 2003 ನೇ ಡಿಸೆಂಬರ್ 3 ರಂದು ಸುಮಾರು 460 ಜನ ಸದಸ್ಯರಿಂದ ರೂ. 4.02 ಲಕ್ಷ ಪಾಲು ಬಂಡವಾಳ, ಸುಮಾರು 2 ಲಕ್ಷ ಠೇವಣಿಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಉದ್ದೇಶಗಳನ್ನಿಟ್ಟುಕೊಂಡು, ಚಿಕ್ಕಮಟ್ಟದಲ್ಲಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೈಗೊಂಡಿರುವ ಈ ಸಂಸ್ಥೆಯು ಇಪ್ಪತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿ, ದ್ವಿದಶ ಸಂಭ್ರಮದಲ್ಲಿದೆ. ಕಳೆದ ವರ್ಷ ವ್ಯವಹಾರ ಕ್ಷೇತ್ರವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದು, ಮೂಡಬಿದರೆ ತಾಲೂಕಿನ ಆಲಂಗಾರು ಹಾಗೂ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿನ ಎರಡು ಶಾಖೆಗಳು, ಬಂಟ್ವಾಳ ತಾಲೂಕಿನ ವಿವಿಧ ಹೋಬಳಿ ಮಟ್ಟದ ನಗರ ಪ್ರದೇಶಗಳಲ್ಲಿ 10 ಶಾಖೆಗಳು ಸೇರಿ ಒಟ್ಟು 12 ಶಾಖೆಗಳೊಂದಿಗೆ ಈ ಸಹಕಾರಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಬಂಟ್ವಾಳ ತಾಲೂಕಿನ ಪೆರ್ನ ಎಂಬಲ್ಲಿ ಶಾಖೆ ತೆರೆಯಲು ಇಲಾಖಾ ಅನುಮತಿ ಪಡೆಯಲಾಗಿದ್ದು, ಮುಂದಿನ ಮೇ ತಿಂಗಳಲ್ಲಿ ಈ ಶಾಖೆಯು ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂಸ್ಥೆಯಲ್ಲಿ ಈಗಾಗಲೇ 5978 ಸದಸ್ಯರು ಸದಸ್ಯತ್ವ ಪಡೆದು, ಸುಮಾರು 20,000 ಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿ 1.45 ಕೋಟಿ ಪಾಲು ಬಂಡವಾಳ, 1.98ಕೋಟಿಯಷ್ಟು ಕ್ಷೇಮ ನಿಧಿ, ಕಟ್ಟಡ ನಿಧಿ ಹಾಗೂ ಇತರ ನಿಧಿಗಳೊಂದಿಗೆ, ಸುಮಾರು 52.54 ಕೋ ಠೇವಣಿಯೊಂದಿಗೆ, ಈ 55 ಕೋಟಿಯಷ್ಟು ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸದಸ್ಯರಿಗೆ ನೀಡಿರುವ ಹೊರಬಾಕಿ ಸಾಲದ ಬಾಬ್ತು ರೂ. 47.73 ಕೋಟಿಯಷ್ಟು ಇದ್ದು, ಆಭರಣ ಸಾಲ, ಆಸ್ತಿ ಅಡಮಾನ ಸಾಲ ಹಾಗೂ ಇನ್ನಿತರ ಭದ್ರತಾ ಸಾಲಗಳಿವೆ. ಸಂಸ್ಥೆಯು ಈಗಾಗಲೇ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಹಾಗೂ ಬೆಂಜನಪದವಿನಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಇದರ ಮೌಲ್ಯ ಸುಮಾರು ರೂ. 50 ಲಕ್ಷವಾಗಿದೆ. 85.95 ಲಕ್ಷದಷ್ಟು ಕ್ಷೇಮ ನಿಧಿಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಖಾಯಂ ಠೇವಣಿಯಾಗಿ ಇರಿಸಲಾಗಿದೆ.
ಸಂಸ್ಥೆಗೆ ಈ ವರ್ಷ 20 ವರ್ಷ ತುಂಬುತ್ತಿರುವುದರಿಂದ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ಸಹಕಾರಿ ಕ್ಷೇತ್ರದ ಸಿಬ್ಬಂದಿಗಳಿಗೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಇದ್ದು, ಮುಂದಿನ ಡಿಸೆಂಬರ್ ತಿಂಗಳಲ್ಲಿ ಒಂದು ಸಂಭ್ರಮದ ಅವಿಸ್ಮರಣೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಆರ್ಥಿಕ ವ್ಯವಹಾರಗಳ ನಿರ್ವಹಣೆಗಾಗಿ, ಮುಖ್ಯಕಾರ್ಯನಿರ್ವಣಾಧಿಕಾರಿ ಸೇರಿ ಒಟ್ಟು 24 ಜನ ಖಾಯಂ ಸಿಬ್ಬಂದಿಗಳು ಹಾಗೂ 14 ಜನ ಗುತ್ತಿಗೆ ಆಧಾರದ ನೆಲೆಯಲ್ಲಿ ಹಾಗೂ 15 ಜನ ಪಿಗ್ಮಿ ಸಂಗ್ರಾಹಕರು ಉತ್ತಮ 14 ಕಾರ್ಯಕ್ರಮತೆಯೊಂದಿಗೆ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಡಿಯಲ್ಲಿ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಅಜಿತ್ ಕುಮಾರ್ ಜೈನ್ ಹಾಗೂ ನಿರ್ದೇಶಕರುಗಳಾದ ಸ್ವಪ್ನರಾಜ್, ರಾಜೇಶ್ ಬಿ, ಜೆ. ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿ’ಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ ಹಾಗೂ ನಾರಾಯಣ ಸಿ. ಪೆರ್ನ ಉಪಸ್ಥಿತರಿದ್ದರು.