ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ನೇತೃತ್ವದಲ್ಲಿ ಐಕ್ಯತಾ ಸಮಾವೇಶ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಏಪ್ರಿಲ್ 9ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಈ ವಿಷಯವನ್ನು ಪುರಸಭಾ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಚಂಡ್ತಿಮಾರ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಕಾರ್ಯಕ್ರಮವನ್ನು ವಿಧಾನಪರಿಷತ್ತು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ವಹಿಸಲಿದ್ದಾರೆ ಎಂದರು.
ಭವಿಷ್ಯತ್ತಿನ ಬಂಟ್ವಾಳಕ್ಕಾಗಿ ಈ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಬಿಜೆಪಿ ಸರಕಾರದಿಂದ ಪರಿಶಿಷ್ಟ ಸಮುದಾಯದ ಜನಸಾಮಾನ್ಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಮೀಸಲಾತಿ ಎಂಬುದು ಪರಿಶಿಷ್ಟರ ಭಿಕ್ಷೆಯಲ್ಲ, ಅದು ಹಕ್ಕು ಎಂಬ ನೆಲೆಯಲ್ಲಿ ಈ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಜಾರಿಗೆ ಮಾಡಹೊರಟಿಡುವ ಮೀಸಲಾತಿಯಿಂದ ದ.ಕ.ಜಿಲ್ಲೆಯ ಪ.ಸಮುದಾಯಕ್ಕೆ ಅನ್ಯಾಯವಾಗಿದೆ. ಬಿ.ಸಿ.ರೋಡಿನಲ್ಲಿ ಇದುವರೆಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡದೆ ಈಗಿನ ಶಾಸಕರು ಪರಿಶಿಷ್ಟರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದ ಚಂಡ್ತಿಮಾರ್, ಕಾಂಗ್ರೆಸ್ ಒಂದರಿಂದಷ್ಟೇ ಪರಿಶಿಷ್ಟರಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದರು.
ಮೀಸಲಾತಿ ವಿಚಾರದಲ್ಲಿ ಅಂಗಾರರಿದ್ದೂ ಅನ್ಯಾಯವಾಗಿದೆ ಎಂದ ಅವರು, ಮೇಲ್ವರ್ಗದ ಶಾಸಕರು ಅಂಗಾರ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದಲ್ಲಿ ಕುಳ್ಳಿರಿಸಿ, ಅವರಡಿಯಲ್ಲಿ ಕೆಲಸ ಮಾಡಲು ಹಿಂಜರಿಕೆಪಟ್ಟಿರಬಹುದು ಎಂದು ಸಂಶಯಪಟ್ಟರು. ಸಂಗಬೆಟ್ಟು, ಚೆನ್ನೈತೋಡಿ, ಕಕ್ಯಪದವು ಹಾಗೂ ಬಿ.ಸಿ.ರೋಡಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಇನ್ನೂ ಆಗಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಪ.ಪಂಗಡ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ನಾರಾಯಣ ನಾಯ್ಕ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಅಣ್ಣು ಖಂಡಿಗ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಪಂ ವಿಭಾಗ ಅಧ್ಯಕ್ಷ ಚಂದ್ರಹಾಸ ನಾಯ್ಕ್, ಪಾಣೆಮಂಗಳೂರು ಬ್ಲಾಕ್ ಪ.ಜಾತಿ ವಿಭಾಗದ ಅಧ್ಯಕ್ಷ ಪ್ರೀತಮ್ ರಾಜ್ ದ್ರಾವಿಡ್, ವಿವಿಧ ಸಮಘಟನೆಗಳ ಪ್ರಮುಖರಾದ ಸತೀಶ್ ಅರಳ, ಅಮ್ಮಣ್ಣ, ನಾಗರಾಜ್, ರಾಜ ಚಂಡ್ತಿಮಾರ್, ಮೋಹನ ಚಂಡ್ತಿಮಾರ್
ದಿವಾಕರ ಚಂಡ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.