ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಚಿಣ್ಣರ ಚಿಲಿಪಿಲಿ ಮಕ್ಕಳ ಬೇಸಗೆ ಶಿಬಿರ ಆರಂಭಗೊಂಡಿತು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ಆಯೋಜನೆಯ ಉದ್ದೇಶ ವಿವರಿಸಿ, ಮೊಬೈಲ್ ನೋಡುತ್ತಲೇ ಕುಳಿತುಕೊಳ್ಳುವ ಮಕ್ಕಳು ಇಂಥ ಕಾರ್ಯಕ್ರಮಗಳಿಂದ ಹೊರಜಗತ್ತಿನ ಸಂಪರ್ಕ ಪಡೆಯಲು ಸುಲಭವಾಗುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕಿ ದಿಶಾ ಆಚಾರ್ಯ, ಜೇಸಿ ಕಾರ್ಯದರ್ಶಿ ರಮ್ಯಾ ವಿನಾಯಕ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಬಿ. ರಾಮಚಂದ್ರ ರಾವ್ ಸ್ವಾಗತಿಸಿದರು. ಮಹೇಶ್ ಕುಲಾಲ್ ಅವರು ನೃತ್ಯ ತರಬೇತಿ ನಡೆಸಿಕೊಟ್ಟರು. ಐದು ದಿನಗಳ ಕಾರ್ಯಕ್ರಮದಲ್ಲಿ ಚಿತ್ರಕಲೆ, ಕ್ರಾಫ್ಟ್, ಕ್ಲೇ ಆರ್ಟ್ ಮತ್ತಿತರ ತರಬೇತಿ ನೀಡಲಾಗುತ್ತದೆ.