ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಎಲ್ಲರೂ ಖಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ನೀತಿ ಸಂಹಿತೆಯನ್ನು ಪಾಲಿಸಬೇಕು. ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ೨೦೫-ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ನಿಯುಕ್ತಿಗೊಂಡಿರುವ ಚುನಾವಣಾಧಿಕಾರಿ ಅಭಿದ್ ಗಡ್ಯಾಲ್ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ ಸೌಧದ ಚುನಾವನಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೨೨,೯೦೧ ಮತದಾರರಿದ್ದು ಈ ಪೈಕಿ ೧,೦೯,೭೧೫ ಪುರುಷ ಹಾಗೂ ೧,೧೩,೧೮೬ ಮಹಿಳಾ ಮತದಾರರಿದ್ದಾರೆ. ಇಷ್ಟು ಮತದಾರರಿಗೆ ೨೪೯ ಮತಗಟ್ಟೆಗಳನ್ನು ಸಿದ್ದಮಾಡಿಕೊಂಡಿದ್ದು ಈ ಪೈಕಿ ೨೧೩ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದ್ದು ೩೬ ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದ್ದು ಅಧಿಕಾರಿಗಳ ತಂಡವನ್ನು ರಚಿಸಿಕೊಳ್ಳಲಾಗಿದೆ, ರಾಜಕೀಯ ಸಭೆಗಳನ್ನು ನಡೆಸಲು ಕಡ್ಡಾಯವಾಗಿ ಚುನಾವಣಾಧಿಕಾರಿ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಅಂತಹ ಕಾರ್ಯಕ್ರಮಗಳಿಗೆ ಸುವಿಧಾ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುವುದು. ಮದುವೆ ಮೊದಲಾದ ಖಾಸಗಿ, ಸಾಮಾಜಿಕ ಕಾರ್ಯಕ್ರಮಗಳು ಜಾತ್ರ ಉತ್ಸವಗಳಿಗೆ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕಾಗಿದ್ದು ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರಮ ನಡೆಸುವ ಬಗ್ಗೆ ಒಪ್ಪಿಗೆ ಪತ್ರ ನೀಡೆಬೇಕು ಎಂದು ತಿಳಿಸಿದರು. ಅನಿವಾರ್ಯ ಸಂದರ್ಭದಲ್ಲಿ ೮೦ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಶೇ.೪೦ಕ್ಕಿಂತ ಹೆಚ್ಚು ಭಾಗ ವಿಕಲ ಚೇತನರು ಅಪೇಕ್ಷೆ ಪಟ್ಟಲ್ಲಿ ಮನೆಯಿಂದಲೇ ಅಂಚೆ ಮತದಾನಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗಡಿಯಲ್ಲಿ ಕಣ್ಗಾವಲು
ಬಂಟ್ವಾಳ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ ಕಣ್ಗಾವಲು ಇರಿಸಲಾಗಿದೆ. ಕಾನೂನು ಬಾಹಿರವಾಗಿ ಹಣ ಸಾಗಾಟ ಸೇರಿದಂತೆ ಎಲ್ಲಾ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುವುದು, ಜನ ಸಾಮಾನ್ಯರು ಸಿವಿಝಿಲ್ ಆಪ್ ಬಳಸಿಕೊಂಡು ಅಥವಾ ೧೯೫೦ ಸಹಾಯವಾಣಿಗೆ ಕರೆ ಮಾಡಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರುಗಳನ್ನು ದಾಖಲಿಸಬಹುದಾಗಿದೆ.
ಚುನವಣಾಧಿಕಾರಿ ಕಚೇರಿಯಲ್ಲೂ ಒಂದು ಕಂಟ್ರೋಲ್ ರೂಂ ಆರಂಭವಾಗಲಿದ್ದು ದೂರುಗಳು ಬಂದಾಗ ನಮ್ಮ ತಂಡ ಅಲ್ಲಿಗೆ ಧಾವಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಳ್ಳುವ ಹೊಸ ಮತದಾರರಿಗೆ ಎ.೧೧ರವರೆಗೆ ಕಾಲವಕಾಶವಿದ್ದು ಅದರೊಳಗಾಘಿ ಫಾರಂ ೬ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಎಪ್ರಿಲ್ ೧೩ ರಂದು ಚುನಾವಣೆಗ ಗೆಜೆಟ್ ನೋಟೀಫಿಕೇಶನ್ ಹೊರಡಿಸಲಾಗುವುದು, ಎ.೨೦ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಎ.೨೧ರಂದು ನಾಮಪತ್ರಗಳ ಪರಿಶೀಲನೆ, ಎ.೨೪ರೊಳಗಾಗಿ ನಾಮಪತ್ರ ಹಿಂಪಡೆಯ ಬಹುದಾಗಿದೆ. ಮೇ ೧೦ ರಂದು ಚುನಾವಣೆ ನಡೆಯಲಿದ್ದು ಮೇ.೧೩ರಂದು ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಎಸ್.ಬಿ.ಕೂಡಲಗಿ ಉಪಸ್ಥಿತರಿದ್ದರು.
—