ಬಂಟ್ವಾಳ: ಅರ್ಕುಳ ಬೀಡಿನಿಂದ ಶ್ರೀ ಕ್ಷೇತ್ರ ಪೊಳಲಿಗೆ ಪಾರಂಪರಿಕವಾಗಿ ಸಂಪನ್ನಗೊಳ್ಳಲಿರುವ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಭಂಡಾರದ ಮೆರವಣಿಗೆ ಎ.12ರಂದು ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 6.30ಕ್ಕೆ ಭಂಡಾರದ ಮೆರವಣಿಗೆ ಅರ್ಕುಳ ಬೀಡಿನಿಂದ ಹೊರಟು ಮೇರಮಜಲು, ಕುಟ್ಟಿಕಳ, ತೇವುಕಾಡು, ಮಹಮ್ಮಾಯಿ ಕಟ್ಟೆ ಅಬ್ಬೆಟ್ಟುಗೋಳಿ, ಅಮ್ಮುಂಜೆ, ಬಡಕಬೈಲು, ಪುಂಚಮೆ ಮಾರ್ಗವಾಗಿ 11 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿಯನ್ನು ತಲುಪಲಿದೆ. ರಾತ್ರಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ನೇಮ ನಡೆದು ಮರು ದಿನ ಎ. 13ರಂದು ಶನಿವಾರ ಪೂರ್ವಾಹ್ನ 6 ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟು ಬಡಕಬೈಲು, ಧನುಪೂಜೆ, ಕೊಡ್ಮಾಣ್, ಬೆಂಜನಪದವು, ಕಲ್ಪನೆ, ನೆತ್ತರಕೆರೆ, ಕಡೆಗೋಳಿ, ಫರಂಗಿಪೇಟೆ ಮಾರ್ಗವಾಗಿ ಪೂರ್ವಹ್ನ 9 ಗಂಟೆಗೆ ಅರ್ಕುಳ ಬೀಡು ತಲುಪಲಿದೆ.
ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೆಶ್ವರೀ ಅಮನ್ನವರಿಗೂ ಶ್ರೀ ಕ್ಷೇತ್ರ ಅರ್ಕುಳದ ಧರ್ಮದೇವತೆಗಳಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪುನರ್ ನಿರ್ಮಾಣದ ಸಂದರ್ಭದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಮಾಡ, ಸಾಣ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವು ಪೊಳಲಿ ಕ್ಷೇತ್ರಕ್ಕೆ ಆಗಮಿಸಿ ನೇಮ ಸೇವೆಯೂ ಸಂಪನ್ನಗೊಂಡಿತ್ತು. ಇದೀಗ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಮತ್ತೊಮ್ಮೆ ಧರ್ಮದೇವತೆಗಳ ಭಂಡಾರ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ.