ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ 14 ದಿನಗಳ ಕಾಲ ನಡೆಯಲಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಪೊಳಲಿ ಸಮೀಪದ ಪುಂಚಮೆಯಲ್ಲಿ ಶುಕ್ರವಾರ ಬೆಳಿಗ್ಗೆ ಅದ್ಧೂರಿಯ ಚಾಲನೆ ನಿಡಲಾಯಿತು. ಬಂಟ್ವಾಳ ವೆಂಕಟರಮಣ ದೇವಸ್ಥಾನ, ಅಗ್ರಹಾರ ಚರ್ಚ್, ಬಂಟ್ವಾಳ ಕೆಳಗಿನ ಪೇಟೆ ಜುಮಾ ಮಸೀದಿ ಸಹಿತ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪುಂಚಮೆ ಬಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರವನ್ನು ವಿಜೃಂಭಿಸಲು ಅವಕಾಶ ನೀಡಿದ್ದು, ಬೆಲೆ ಏರಿಕೆಯಿಂದ ಜನರು ಜೀವನ ಮಾಡಲು ಅಸಾಧ್ಯ ಎನ್ನುವ ಸ್ಥಿತಿ ಎದುರಾಗಿದೆ, ಜನರನ್ನು ವ್ಯವಸ್ಥಿತವಾಗಿ ಮೋಸ ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದ್ದು, ಬಿಜೆಪಿ ಸುಳ್ಳಿನ ಸರಕಾರ ಎಂದವರು ಆರೋಪಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುತ್ತಿತ್ತು, ಆದರೆ ಬಿಜೆಪಿ ಸರಕಾರ ಕಮೀಷನ್ ಗಾಗಿ ಕಾಮಗಾರಿ ನಡೆಸುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈಗಾಗಲೇ ಭರವಸೆ ನೀಡಿದಂತೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ತಿಳಿಸಿದಂತೆ ಜನರಿಗೆ ಸೌಕರ್ಯಗಳನ್ನು ಒದಗಿಸುತ್ತದೆ, ಜನರ ಹಿತಕ್ಕಾಗಿ ಈ ಬಾರಿ ಬಂಟ್ವಾಳದಲ್ಲಿ ರಮಾನಾಥ ರೈ ಶಾಸಕರಾಗಿ ಆಯ್ಕೆ ಆಗಬೇಕಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತುಲನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಡೀ ರಾಜ್ಯದಲ್ಲಿ 94 ಸಿ.ಹಕ್ಕು ಪತ್ರ ಹಾಗೂ 20ಸಾವಿರ ವಸತಿ ಯೋಜನೆಗಳನ್ನು ಬಂಟ್ವಾಳದಲ್ಲಿ ಮಂಜೂರು ಮಾಡಿದ ಕೀರ್ತಿ ತನ್ನ ಅವಧಿಯಲ್ಲಿ ನಡೆದಿದ್ದು, ಇದನ್ನು ಜನರಿಗೆ ನೆನಪಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು. ಪಶ್ಚಿಮ ವಾಹಿನಿ ಯೋಜನೆಗೆ ಮೂಲ ಕಾರಣ ಕಾಂಗ್ರೆಸ್ ಸರಕಾರವಾಗಿದ್ದು, ಆದರೆ ಈ ಬಗ್ಗೆ ಬಿಜೆಪಿ ದಾರಿತಪ್ಪಿಸುವ ಹೇಳಿಕೆ ನೀಡುತ್ತಿದೆ ಎಂದವರು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಹಿನಾಯತ್ ಆಲಿ, ಪ್ರಚಾರ ಸಮಿತಿ ಪ್ರಮುಖರಾದ ಪೃಥ್ವಿ ರಾಜ್, ಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ್ ಜೈನ್, ಎಡ್ತೂರು ರಾಜೀವ ಶೆಟ್ಟಿ, ಜಗದೀಶ್ ಕೊಯಿಲ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಲವೀನಾ ವಿಲ್ಮಾ ಮೋರಸ್, ಮಲ್ಲಿಕಾ ಶೆಟ್ಟಿ, ಜಯಂತಿ ವಿ.ಪೂಜಾರಿ, ವೆಂಕಪ್ಪ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಪದ್ಮನಾಭ ರೈ, ಪಿ.ಎ. ರಹೀಂ, ಸಂಪತ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಮಧುಸೂದನ್ ಶೆಣೈ, ಮನೋಹರ್ ನೇರಂಬೋಳು, ಲೋಲಾಕ್ಷ ಶೆಟ್ಟಿ, ಚಂದ್ರಹಾಸ ಭಂಡಾರಿ, ಮಹಮ್ಮದ್ ಶರೀಫ್, ಸಿದ್ದಿಕ್ ಗುಡ್ಡೆಯಂಗಡಿ, ಪ್ಲೋಸಿ ಡಿಸೋಜಾ, ಚಂದ್ರಶೇಖರ ಪೂಜಾರಿ, ಅಬ್ಬಾಸ್ ಅಲಿ, ಲುಕ್ಮಾನ್, ಶಬೀರ್ ಸಿದ್ದಕಟ್ಟೆ, ಡೆಂಜಿಲ್ ಮೊದಲಾದವರು ಉಪಸ್ಥಿತರಿದ್ದರು. ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.