ಬಂಟ್ವಾಳ: ಕೃಷಿ ಭೂಮಿಯನ್ನು ನಾಶಪಡಿಸಿ, ಜಿಲ್ಲೆಯ ರೈತರ ವ್ಯಾಪಕ ವಿರೋಧದ ನಡುವೆಯೂ ನಿರ್ಮಾಣಗೊಳ್ಳುತ್ತಿರುವ ಉಡುಪಿ – ಕಾಸರಗೋಡು ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಬುಧವಾರ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಮುಂಭಾಗ ನಡೆಯಿತು. ಪ್ರತಿಭಟನೆಯ ಕಾವು ಏರುತ್ತಿದ್ದರೂ ಸ್ಥಳಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಬಾರದೇ ಇದ್ದುದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಜಿಲ್ಲಾಧಿಕಾರಿ ಬರ ಬೇಕೆಂದು ಆಗ್ರಹಿಸಿ ಬಿ.ಸಿ.ರೋಡು- ಕೈಕುಂಜೆ ರಸ್ತೆಯಲ್ಲಿ ಕೆಲಹೊತ್ತು ರಸ್ತೆ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರೀಮಂತರನ್ನು, ಕೈಗಾರಿಕೋದ್ಯಮಿಗಳನ್ನು ಜೋಪಾನ ಮಾಡುವುದಷ್ಟೇ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಸೀಮಿತವಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಿದೆ. ಎಲ್ಐಸಿ, ಬ್ಯಾಂಕ್ನಂತಹ ಸೇವಾ ಸಂಸ್ಥೆಗಳು ಕೂಡ ಶ್ರೀಮಂತ ಉದ್ಯಮಿಗಳ ಕೈ ಸೇರುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಹೇರಳವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ, ಪಾವಗಡದಲ್ಲಿ ೫ ಸಾವಿರ ಎಕ್ರೇ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಅಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡರೆ ಯುಪಿಸಿಎಲ್, ಕೆಪಿಸಿಎಲ್ಗಳೂ ಬೇಡ ಎಂದರು. ಉಡುಪಿ ಕಾಸರಗೋಡು ೪೦೦ ಕೆವಿ ವಿದ್ಯುತ್ ಮಾರ್ಗವನ್ನು ಮರ್ಯಾದೆಯಿಂದ ನಿಲ್ಲಿಸಿಬಿಡಿ ಎಂದ ಅವರು ಖಾಸಗಿ ಒಡೆತನದ ವಿದ್ಯುತ್ ಶಕ್ತಿ ಕಂಪೆನಿಗಳಿಂದ ಶ್ರೀಲಂಕ, ಅರಬ್, ಆಫ್ರಿಕಾ ದೇಶಕ್ಕೆ ನಮ್ಮ ದೇಶದಿಂದ ವಿದ್ಯತ್ ಸರಬರಾಜು ಆಗುತ್ತಿದೆ, ಸಮುದ್ರದ ಆಳದಲ್ಲಿ ಬೇರೆ ದೇಶಕ್ಕಾಗಿ ವಿದ್ಯುತ್ ಸರಬರಾಜು ಮಾಡುವ ನಮ್ಮ ದೇಶದಲ್ಲಿ ರೈತರ ಕೃಷಿಕರ ಜಾಗವನ್ನೇ ಯಾಕೆ ಬಳಕೆ ಮಾಡಿಕೊಳ್ಳಬೇಕು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ರೈತರ ಜಾಗದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಲು ಬಿಡುವುದಿಲ್ಲ, ನಮ್ಮ ರೈತರ ಜಮೀನಿನ ಮೇಲೆ ಯಾವುದೇ ಸರ್ವೇ ನಡೆಯ ಕೂಡದು ಎಂದು ಎಚ್ಚರಿಸಿದರು. ಇಲ್ಲಿನ ಜಿಲ್ಲಾಡಳಿತ ಅಂಬಾನಿಯ ಏಜೆಟ್ ಆಗಿ ಕೆಲಸ ಮಾಡುವ ಬದಲು ರೈತರ ಹಿತ ಕಾಯಬೇಕು ಎಂದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ೪೦೦ ಕೆವಿ ವಿದ್ಯುತ್ ಮಾರ್ಗ ಹಾದುಹೋಗಲು ರೈತರ ಸಹಮತ ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ ಈ ಬಗ್ಗೆ ಮಾಧ್ಯಮಗಳಲ್ಲಿ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ಆದರೆ ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ರೈತರ ಸಭೆ ನಡೆಸಿಲ್ಲ, ಈ ಸಮಸ್ಯೆ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಆರೋಪಿಸಿದ ಅವರು ನಮಗೆ ಪರಿಹಾರ ಬೇಡ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದರು.
ಸಹಾಯಕ ಆಯುಕ್ತ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಭೇಟಿ ನೀಡಿ ಪ್ರತಿಭಟನಕಾರ ಜೊತೆಗೆ ಮಾತುಕತೆ ನಡೆಸಿದರಾದರೂ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ಕೆ. ರಾಜು ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿದರು. ಪ್ರತಿಭಟನಕಾರರ ಬೇಡಿಕೆಯಂತೆ ಈಗಿನ ಪ್ರಸರಣ ಮಾರ್ಗವನ್ನು ಕೈಬಿಟ್ಟು ಪರ್ಯಾಯ ಮಾರ್ಗ ಬಳಸುವ ಬಗ್ಗೆ ಸರ್ಕಾರಕ್ಕೆ ಲಿಖಿತ ವರದಿಯನ್ನು ಸಲ್ಲಿಸಿ ಒಂದು ವಾರದೊಳಗೆ ಅದರ ಯಥಾ ಪ್ರತಿಯನ್ನು ರೈತರಿಗೆ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಕಾಲ್ನಡಿಗೆ ಮೆರವಣಿಗೆ:
ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನಾ ಸಭೆ ನಡೆಯುವ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾಕಾರರು ಕಾಲ್ನಡಿಗೆಯ ಮೂಲಕ ಆಗಮಿಸಿದರು.
ಮಾಜಿ ಸಚಿವ ಬಿ.ರಮನಾಥ ರೈ ಪ್ರತಿಭಟನಾ ಸ್ಥಳ್ಕಕೆ ಆಗಮಿಸಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಸಂಘಟನೆಯ ಜಿಲ್ಲಾಧ್ಯಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಕಾನೂನು ಸಲಹೆಗಾರ ಎಸ್.ಪಿ. ಚೆಂಗಪ್ಪ, ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ತಾಲೂಕು ಘಟಕದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಉಡುಪಿ ಕಾಸರಗೋಡು ೪೦೦ ಕೆ.ವಿ. ವಿದ್ಯುತ್ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಕೋಚೋಡಿ, ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಕುಳವೂರುಗುತ್ತು, ತುಳುನಾಡು ಪಂಚಾಯತ್ ಜಾಗೃತ ವೇದಿಕೆಯ ಅಧ್ಯಕ್ಷ ರೋಷನ್ ಲೋಬೋ, ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್ ಮತ್ತಿತರರು ನೇತೃತ್ವ ವಹಿಸಿದ್ದರು.