ಶಿಕ್ಷಣ,ಸ್ವಾವಲಂಬನೆ,ಸ್ವಾಭಿಮಾನ ಈ ಮೂರನ್ನು ಮಹಿಳೆಯರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂಬುದಾಗಿ ಮಂಗಳೂರಿನ ಸ್ವಸ್ತಿಕ್ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಅವರು ಹೇಳಿದರು. ಪುರುಷರನ್ನು ಪ್ರಶ್ನಿಸಬಹುದೇ ಹೊರತು ಕೌಟುಂಬಿಕ ಸಮಗ್ರತೆಯಲ್ಲಿ ಈರ್ವರ ಅನಿವಾರ್ಯತೆಯನ್ನೂ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗುತ್ತದೆ, ಎಂದು ಅವರು ಪ್ರತಿಪಾದಿಸಿದರು. ದ.ಕ ಜಿಲ್ಲಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಮಹಿಳಾ ವಿಭಾಗದವರಿಂದ ಬಂಟ್ವಾಳದ ತುಳು ಶಿವಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಹಿಳೆ ಇಲ್ಲದ ಜಗತ್ತನ್ನು ಊಹಿಸಲೇ ಸಾಧ್ಯವಿಲ್ಲ ಎಂದು ಬಿ.ಸಿ.ರೋಡು ಸೋಮಯಾಜಿ ಆಸ್ಪತ್ರೆಯ ವೈದ್ಯೆ ಡಾ.ಶಶಿಕಲಾ ಸೋಮಯಾಜಿ ಅವರು ಅಭಿಪ್ರಾಯಪಟ್ಟರು. ಜಗತ್ತಿನಲ್ಲಿ ಸ್ತ್ರೀಯನ್ನು ಮಾತೃಸ್ವರೂಪದಲ್ಲಿ ಗೌರವಿಸುವ ದೇಶವಿದ್ದರೆ ಅದು ಭಾರತ ಮಾತ್ರ. ವೈದಿಕ ಪರಂಪರೆ ಅಥವಾ ಋಷಿ ಪರಂಪರೆಯಲ್ಲೇ ಇರಬಹುದು ಸ್ತ್ರೀ ಯಾವತ್ತೂ ಪರಿಪೂರ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ, ಆಕೆಯನ್ನು ಹೊರತಾದ ಸಮಾಜವನ್ನು ಕಲ್ಪಿಸುವುದೂ ಅಸಾಧ್ಯ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಹಾಗೂ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ಮಹೇಶ್ ಕಜೆ ಅವರು ಹೇಳಿದರು. ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಶ್ರೀ ಗಿರಿ ಪ್ರಕಾಶ್ ತಂತ್ರಿ, ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮದ ಅಧ್ಯಕ್ಷ ರಾಜಾರಾಮ ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಲ್ಕು ಮಂದಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ದ.ಕ ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ವಕೀಲೆ ಉಮಾ ಯನ್. ಸೋಮಯಾಜಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪವಿತ್ರಾ ಮಯ್ಯ ಪ್ರಾರ್ಥಿಸಿದರು. ಪೂರ್ಣಿಮಾ ಪ್ರಭಾಕರ್ ಪೇಜಾವರ ನಿರೂಪಣೆ ಗೈದ ಈ ಕಾರ್ಯಕ್ರಮದ ಕೊನೆಯಲ್ಲಿ ನಿವೃತ್ತ ಪ್ರಾಧ್ಯಾಕಿ ವತ್ಸಲಾ ರಾಜ್ಞಿ ವಂದಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಭೆ ಮುಕ್ತಾಯಗೊಂಡಿತು