ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಸೋಮವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗ ನಿವಾರಣೆಗೆ ಔಷಧಿಯಷ್ಟೇ ಪೌಷ್ಟಿಕಾಹಾರ ಸೇವೆನೆಯೂ ಮುಖ್ಯ. ಆದ್ದರಿಂದ ಸೇವಾಂಜಲಿ ಪ್ರತಿಷ್ಠಾನವು ತಾಲೂಕಿನ ಕ್ಷಯ ರೋಗಿಗಳನ್ನು ಗುರುತಿಸಿ ದೊಡ್ಡಮಟ್ಟದಲ್ಲಿ ಆಹಾರ ಧವಸ ಧಾನ್ಯ ವಿತರಿಸುವ ಕಾರ್ಯ ಹಮ್ಮಿಕೊಂಡಿದೆ ಎಂದರು. ಕಣ್ಣಿಗೆ ಕಾಣದ ದೇವರಿಗೆ ಪೂಜೆ, ಖರ್ಚು ಮಾಡುವ ಬದಲು ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ಅಪೇಕ್ಷಿಸಿದನ್ನು ನೀಡುವ ಮೂಲಕ ದೇವರನ್ನು ಕಾಣುವುದು ಶ್ರೇಷ್ಟ ಗುಣ.ಇಂತಹ ಮಹಾನ್ ಕಾರ್ಯವನ್ನು ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಆಶಾಕಾರ್ಯಕರ್ತರು ತಾಯಿಯ ಸ್ಥಾನದಲ್ಲಿ ನಿಂತು ರೋಗಿಗಳ ಬಳಿಗೆ ಬಂದು ಸೇವೆ ನೀಡುತ್ತಿದ್ದಾರೆ, ಅವರ ಈ ಕಾರ್ಯಕ್ಕೆ ಗೌರವ ನೀಡಬೇಕು ಎಂದರು.
ಸೇವಾಂಜಲಿ ಪ್ರತಿಷ್ಠಾನದ ಅಧ್ಗಕ್ಷ ವಜ್ರನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ದಾನಿಗಳ ಸಹಕಾರದೊಂದಿಗೆ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುತ್ತಿದ್ದು ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತಿದೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೃಷ್ಣ ಪೊಳಲಿ, ರೋಟರಿ ಕ್ಲಬ್ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಸೇವಾಂಜಲಿಯ ಪೆಲಪಾಡಿ ಸುರೇಶ್ ರೈ, ಪದ್ಮನಾಭ ಕಿದೆಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ್ ಸಾಲ್ಯಾನ್ ಬೆಂಜನಪದವು, ಪ್ರಶಾಂತ್ ತುಂಬೆ , ಬಸವರಾಜ್ ಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು. ಈ ದಿನ 51 ಮಂದಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.