ಬಂಟ್ವಾಳ: ಚುನಾವಣೆಯಲ್ಲಿ ಮತ ಹಾಕಿದ ಮತದಾರರು ನೀಡಿದ ಅವಕಾಶದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗಿದ್ದು, ಶಾಸಕತನದ ಅವಧಿಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಿದ ತೃಪ್ತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಬಂಟ್ವಾಳದ ಬಂಧುಗಳಿಗೆ ಆಯೋಜಿಸಿರುವ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊದಲ ಚುನಾವಣೆಯಲ್ಲಿ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದು, ಹರಕೆಯ ಕುರಿಯನ್ನು ಬಂಟ್ವಾಳದಲ್ಲಿ ನಿಲ್ಲಿಸಿದ್ದಾರೆ ಎಂದು ಗೇಲಿ ಮಾಡಿದರು. ಆದರೆ ೨೦೧೮ರ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಅದಕ್ಕೆ ತಕ್ಕ ಉತ್ತರ ನೀಡುವ ಕಾರ್ಯ ಮಾಡಿದರು. ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದ್ದು, ಜನರ ನೀಡಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಿಜೆಪಿಯ ಪಕ್ಷವನ್ನು ಇನ್ನಷ್ಟು ಗಟ್ಟಿ ಮಾಡುವ ಕಾರ್ಯವನ್ನು ಜತೆಯಾಗಿ ಮಾಡೋಣ. ಈ ಪ್ರೀತಿ ವಿಶ್ವಾಸವನ್ನು ಹೀಗೇ ಇರಿಸೋಣ ಎಂದರು.
ಸಮಾರಂಭವನ್ನು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಉದ್ಘಾಟಿಸಿದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ವೈಟ್ ಲಿಫ್ಟಿಂಗ್ ಕ್ರೀಡಾಪಟು ಚಂದ್ರಹಾಸ ರೈ, ಉದ್ಯಮಿಗಳಾದ ಪ್ರಸನ್ನ ಶೆಟ್ಟಿ ಉಳಿಪಾಡಿಗುತ್ತು, ರವೀಂದ್ರನಾಥ ಆಳ್ವ, ರಮೇಶ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಪ್ರಸ್ತಾವನೆಗೈದರು. ಬೆಂಗಳೂರು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಭಿಮಾನಿ ಬಳಗದ ಸೃತಿನ್ ಶೆಟ್ಟಿ ಕಡೇಶ್ವಾಲ್ಯ ಸ್ವಾಗತಿಸಿದರು. ಶೃತಿಕಾ ಶೆಟ್ಟಿ ಕಡೇಶ್ವಾಲ್ಯ ವಂದಿಸಿದರು. ಅವಿನಾಶ್ ಕಡೇಶ್ವಾಲ್ಯ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ, ಯುವ ಭಾಗವತ ಗಿರೀಶ್ ರೈ ಕಕ್ಯಪದವು ಹಾಗೂ ಹಾಸ್ಯ ಕಲಾವಿದ ದಿನೇಶ್ ರೈ ಕಡಬ ಅವರ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ ಪ್ರದರ್ಶನಗೊಂಡಿತು.