ಬಂಟ್ವಾಳ: ರೈತರ ವಿರೋಧದ ನಡುವೆಯೂ ಕೃಷಿ ಭೂಮಿಯನ್ನು ನಾಶಪಡಿಸಿ, ರೈತರ ಹಿತಾಸಕ್ತಿ ಕಾಪಾಡದೆ ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗಲು ಶತಾಯ ಗತಯ ಪ್ರಯತ್ನ ಪಡುತ್ತಿರುವ ಕಂಪೆನಿ ಹಾಗೂ ಜಿಲ್ಲಾಡಳಿತದ ವಿರುದ್ಧ ಮಾ. 8ರಂದು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಕೋಚೋಡಿ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ದ.ಕ. ಜಿಲ್ಲೆಯಲ್ಲಿ 400 ಕೆ.ವಿ. ಮಾರ್ಗ ಹಾದು ಹೋಗುವ ದಾರಿಯ ಮಾಹಿತಿಯನ್ನು ನೀಡದೆ ಸ್ಯಾಟಲೈಟ್ ಹಾಗೂ ಹೆಲಿಕಾಪ್ಟರ್ ಬಳಸಿ ಸರ್ವೆ ಕಾರ್ಯವನ್ನು ಕಂಪೆನಿ ಮಾಡಿದ್ದು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಸಿಕ್ಕ ಒಂದು ಎಕರೆ, ಅರ್ಧ ಎಕರೆ ಕೃಷಿ ಭೂಮಿಯ ಸಣ್ಣ ಮತ್ತು ಅತೀ ಸಣ್ಣ ರೈತರು ಕೃಷಿ ಮಾಡಿಕೊಂಡು ಬರುತ್ತಿದ್ದು ಈ ವಿದ್ಯುತ್ ಮಾರ್ಗದಿಂದ ಸಂಪೂರ್ಣ ಕೃಷಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. ಕೇರಳದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ರಚನೆಗೆ ಕೃಷಿ ಭೂಮಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಸಂಪೂರ್ಣ ಯೋಜನೆಯನ್ನು ಕೈ ಬಿಡಲಾಗಿತ್ತು. ಆದರೆ ಕರ್ನಾಟಕದಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಲು ಅಡಿಕೆ, ತೆಂಗು, ಗೇರು ಹಾಗೂ ರಬ್ಬರ್ ತುಂಬಿರುವ ಕೃಷಿ ಭೂಮಿಯನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು. ರೈತರ ಅಹವಾಲುಗಳನ್ನು ಸಹಾನುಭೂತಿಯಿಂದ ಪರಿಶೀಲನೆ ಮಾಡುವಂತೆ ಹೈ ಕೋರ್ಟ್ ನಿರ್ದೇಶನ ನೀಡಿದರೂ ದ.ಕ. ಜಿಲ್ಲಾಧಿಕಾರಿ ಕಾಟಚಾರಕ್ಕೆ ರೈತರ ಸಭೆ ನಡೆಸಿ ಕಂಪೆನಿಯವರ ಜೊತೆ ಸೇರಿಕೊಂಡು ಅವರು ಹೇಳಿದಂತೆ ಕೇಳಬೇಕೆಂದು ದಬ್ಬಾಳಿಕೆ ಮಾಡಿರುವುದರಿಂದ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು. ವಿದ್ಯುತ್ ಮಾರ್ಗ ಅರಣ್ಯ ಭೂಮಿಯ ಮೇಲೆ ಹಾದು ಹೋವುದರಿಂದ 10 ಸಾವಿರಕ್ಕೂ ಅಧಿಕ ಮರಗಳು ನಾಶವಾಗುತ್ತದೆ, ಇದರಿಂದ ಹವಮಾನದ ಮೇಲೆ ತೀವ್ರ ಪರಿಣಾಮ ಆಗಲಿದೆ. 400 ಕೆ.ವಿ. ವಿದ್ಯುತ್ ತಂತಿಗಳು ಹೊರಸೂಸುವ ಎಲೆಕ್ಟ್ರಾನಿಕ್ ಮ್ಯಾಗ್ನೇಟ್ ವಿಕಿರಣಗಳು ಮನುಷ್ಯನ ದೇಹ ಸೇರಿ ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ವೈಜ್ಞಾನಿಕ ವರದಿಗಳಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಈ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರೈತರನ್ನು ಬೀದಿಗೆ ತಳ್ಳಲು ಮಾಡುವ ಪ್ರಯತ್ನವನ್ನು ಖಂಡಿಸುವುದಾಗಿ ತಿಳಿಸಿದ ಅವರು ರೈತರ ಕೃಷಿ ಭೂಮಿಯನ್ನು ಬಿಟ್ಟು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಿ ಎಂದು ಆಗ್ರಹಿಸಿದರು.
ಸುದಿಗೋಷ್ಟಿಯಲ್ಲಿ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಚಿತ್ತರಂಜನ್ ಉಪಸ್ಥಿತರಿದ್ದರು.