ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದಲ್ಲಿರುವ ಮಂಗಳೂರಿಗೆ ನೀರು ಸರಬರಾಜಾಗುವ ಶುದೀಕರಣ ಘಟಕದಿಂದ ಹೊರಚೆಲ್ಲುವ ಕಲ್ಮಶ ನೀರು ಹರಿದು ಸ್ಥಳೀಯ ರೈತರಾದ ದಿಲೀಪ್ ರೈ, ಸಂಜೀವ ಪೂಜಾರಿ, ಶೇಖರ್ ಪೂಜಾರಿ ಎಂಬವರ ಕೃಷಿ ನಾಶವಾಗಿದ್ದು ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಹಾಗೂ ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗದೇ ಇದ್ದಾಗ ೨೦೧೫ರಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಬಳಿಕ ಪರಿಹಾರ ಘೋಷಣೆಯಾಯಿತು. ಅದೇ ಸಂದರ್ಭ ನ್ಯಾಯಾಲಯವು ಭೂಮಿಯನ್ನು ಯಥಾಸ್ಥಿತಿಗೆ ತರುವಂತೆ ಆದೇಶಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆರೋಪಿಸಿದರು. ಈ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯಕ್ಕೆ ಮತ್ತೊಂದು ಅಪೀಲು ಸಲ್ಲಿಸಲಾಗಿದೆ ಎಂದು ಸುದಿಗೋಷ್ಟಿಯಲ್ಲಿ ತಿಳಿಸಿದರು.

ತುಂಬೆ ವೆಂಟೆಡ್ ಡ್ಯಾಂನಿಂದ ಹೊರ ಚಿಮ್ಮುವ ನೀರಿನ ರಭಸಕ್ಕೆ ತುಂಬೆ ಗ್ರಾಮದ ರೈತರಾದ ಮೊದೀನ್, ಲೋಕಯ್ಯ, ಪುರುಷೊತ್ತಮ, ಭಾಸ್ಕರ, ಗಂಗಾಧರ, ರಮೇಶ್ ಭಂಡಾರಿ, ಆನಂದ ಶೆಟ್ಟಿ, ದೇವಕಿ ಇವರ ಕೃಷಿ ಭೂಮಿಯು ನದಿ ಪಾಲಾಗಿ, ತೆಂಗು, ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಬಗ್ಗೆ ಮನಾಪ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದರೂ ನಿಷ್ಪ್ರಯೋಜಕವಾಗಿದೆ. ಶಾಸಕ ಯು.ಟಿ.ಖಾದರ್ ಅವರಿಗೂ ದೂರನ್ನು ನೀಡಲಾಗಿದ್ದು ಎಲ್ಲಾ ಪ್ರಯತ್ನಗಳು ವಿಫಲವಾದಾಗ ನ್ಯಾಯಕ್ಕಾಗಿ ಉಚ್ಛನ್ಯಾಯಾಲದಲ್ಲಿ ದಾವೆ ಹೂಡಲಾಗಿದೆ. ಆದ್ದರಿಂದ ದಿಲೀಪ್ ರೈ ಮತ್ತಿತರರ ಕೃಷಿ ಭೂಮಿಯನ್ನು ಉಚ್ಛನ್ಯಾಯಾಲಯದ ಆದೇಶದಂತೆ ಸರಪಡಿಸಿ ಯಥಾಸ್ಥಿತಿಗೊಳಿಸಬೇಕು, ವೆಂಟೆಡ್ ಡ್ಯಾಂನಿಂದ ಸಂತೃಸ್ತರಾದ ೮ ಜನ ರೈತರ ನೀರು ಪಾಲಾದ ಭೂಮಿಗೆ ಸೂಕ್ತ ಪರಿಹಾರ ನೀಡುವುದಲ್ಲದೆ ಉಳಿದ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಿ ಭೂಮಿಯನ್ನು ಉಳಿಸಿಕೊಡಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಸುದೇಶ್ ಮಯ್ಯ, ಸಂತ್ರಸ್ತರಾದ ಮೊಯ್ದೀನ್, ದಿಲೀಪ್ ರೈ, ಲೋಕಯ್ಯ, ಪುರುಷೋತ್ತಮ,, ಭಾಸ್ಕರ, ರಮೇಶ್ ಭಂಡಾರಿ, ಆನಂದ ಶೆಟ್ಟಿ, ಗಂಗಾಧರ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.

