ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿದ ಬಂದ್ ಕರೆಯನ್ವಯ ಬಂಟ್ವಾಳ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿತು. ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸಂಘಟನೆಯ ಒಗ್ಗಟ್ಟು ಪ್ರದರ್ಶಿಸಿದರು. ಸದಾ ಸಾರ್ವಜನಿಕರಿಂದ ತುಂಬಿರುತ್ತಿದ್ದ ತಾಲೂಕು ಆಡಳಿತ ಸೌಧ, ಪುರಸಭೆ ಕಾರ್ಯಲಯ, ಸರ್ಕಾರಿ ಆಸ್ಪತ್ರೆ, ನೋಂದಾಣಿ ಕಚೇರಿ ಬಿಕೋ ಎನ್ನುತ್ತಿದ್ದವು. ಸಾರ್ವಜನಿಕ ಸೇವೆ ಲಭ್ಯವಾಗದೆ ಜನರು ತೊಂದರೆ ಪಡುವಂತಾಯಿತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಜನರು ಸರ್ಕಾರಿ ಕಚೇರಿಗೆ ಆಗಮ,ಇಸಿ ವಾಪಸ್ಸು ತೆರಳುವ ದೃಶ್ಯ ಅಲ್ಲಲ್ಲಿ ಕಂಡು ಬಂತು. ಸರ್ಕಾರಿ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ಬಂದ್ ಬಿಸಿ ನೇರವಾಗಿ ಸಾರ್ವಜನಿಕರ ಮೇಲೆ ತಟ್ಟಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇದರ ಬಂಟ್ವಾಳ ಶಾಖೆಯ ಅಧ್ಯಕ್ಷ ಉಮನಾಥ ರೈ ಹಾಗೂ ಕಾರ್ಯದರ್ಶಿ ಸಂತೋಷ್ ತುಂಬೆ ಪ್ರತಿಕ್ರಿಯಿಸಿ ಸರ್ಕಾರ ನಮ್ಮ ಬೇಡಿಕೆಗೆ ಆಂಶಿಕ ಒಪ್ಪಿಗೆಯನ್ನು ನೀಡಿದ ಹಿನ್ನಲೆಯಲ್ಲಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳು ಬಂದ್ ಆಗುವ ಮೂಲಕ ಪ್ರತಿಭಟನೆಗೆ ಸಂಘದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಂದ್ಗೆ ಬೆಂಬಲಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ