ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ಗೆ ಶನಿವಾರ ಶಾಂತಯತವಾಗಿ ಮತದಾನ ನಡೆದಿದ್ದು ಶೇ. 73.7 ಶೇ. ರಷ್ಟು ಮತದಾನವಾಗಿದೆ ಎಂದು ಚುನಾವಣಾ ಶಾಖೆಯ ಉಪತಹಸೀಲ್ದಾರ್ ನವೀನ್ ಬೆಂಜನಪದವು ತಿಳಿಸಿದ್ದಾರೆ.
ಪುದು ಗ್ರಾ.ಪಂ.ನಲ್ಲಿ ಒಟ್ಟು 11,164 ಮತದಾರರ ಪೈಕಿ 8,228 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ,ಇದರಲ್ಲಿ 5730 ಗಂಡಸರ ಪೈಕಿ 4060 ಹಾಗೂ 5534 ಮಹಿಳೆಯರ ಪೈಕಿ 4168 ಮಂದಿ ಮತ ಚಲಾಯಿಸಿದ್ದಾರೆ.
ಬೆಳಿಗ್ಗೆಯಿಂದಲೇ ಬಿರುಸಿನಿಂದ ಮತದಾನ ನಡೆದಿದ್ದು, ಕೆಲ ಮತಗಟ್ಟೆಯಲ್ಲಿ ಮತದಾರ ತಾಸುಗಟ್ಟಲೇ ಸರತಿ ನಿಲ್ಲುವ ಸನ್ನಿವೇಶ ಉಂಟಾಯಿತು.ಜನಸಂಖ್ಯೆಗನುಗುಣವಾಗಿ ಹೆಚ್ಚುವರಿ ಮತಗಟ್ಟೆ ತೆರೆಯದಿರುವುದರಿಂದ ಮತದಾರ ಸಾಲುಗಟ್ಟಿ ನಿಲ್ಲಬೇಕಾಯಿತು.


34 ಸ್ಥಾನಗಳನ್ನು ಹೊಂದಿರುವ ಪುದು ಗ್ರಾ.ಪಂ. ಗೆ ಒಟ್ಟು 99 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆದಿದೆ.
ವಿವಿಧ ಕಾರಣಗಳಿಂದ ತೆರವಾಗಿದ್ದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಕ್ರಮವಾಗಿ 79.7ಶೇ.ಹಾಗೂ 73 ಶೇ.ಮತದಾನ ನಡೆದಿದ್ದು, ಇಲ್ಲಿಯೂ ಶಾಂತಿಯುತವಾಗಿ ಮತದಾನ ನಡೆದಿದೆ.ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದೆ ಬಿಗಿ ಪೋಲಿಸ್ ಬಂದೋ ಬಸ್ತ್ ಮಾಡಲಾಗಿತ್ತು.ಫೆ.28 ರಂದು ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ನಡೆಯಲಿದೆ.