ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪು ವಿಚಾರ ಸಂಕಿರಣ – ಅರಿವು ಯಾನ ಮಾಲಿಕೆ ಕೃತಿ ಬಿಡುಗಡೆ-ತಜ್ಞ ಸಂವಾದ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವಿ. ಹೆಗ್ಗಡೆ ಅವರು ವಿಚಾರ ಸಂಕಿರಣವನ್ನು ಉದ್ಘಾಟನೆಗೈದು ಕೃತಿಕಾರರಾದ ಡಾ. ಪಿ.ಎನ್. ನರಸಿಂಹ ಮೂರ್ತಿ ಅವರ ಅಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಮತ್ತು ಐಗಳ್ ಎಂಬ ದ.ಕ.ಇತಿಹಾಸದ ದಂತಕಥೆ ಎಂಬ ಎರಡು ಕೃತಿಗಳ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಡಾ.ಹೇಮಾವತಿ ವಿ.ಹೆಗ್ಗಡೆ ಅವರು ಕೃಷಿಯ ಬಗ್ಗೆ ಆಳ- ಅರಿವು ತಿಳಿಯದವರಿಂದ ನಷ್ಟವುಂಟಾಗುತ್ತಿದೆ. ವಿದ್ಯಾವಂತರು ಕೃಷಿಗೆ ಬಂದರೆ ಕೃಷಿಯಲ್ಲಿ ಅಭಿವೃದ್ಧಿಯೊಂದಿಗೆ ಆದಾಯ ಪಡೆಯಲು ಸಾಧ್ಯವಿದೆ. ಕೃಷಿ ಸಂಸ್ಕೃತಿ ನಾಶವಾಗಿರುವುದರಿಂದ ಹಿಂದಿನ ತಲೆಮಾರಿನ ವಸ್ತುಗಳು ಮ್ಯೂಸಿಯಂ ವಸ್ತುಗಳಾಗಿವೆ. ದಿನಬಳಕೆ ವಸ್ತುಗಳು ಪ್ಲಾಸ್ಟಿಕ್ ಆಗಿ ಬಳಯಾಗುತ್ತಿದೆ .ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡಲು ಇಂತಹ ವಸ್ತು ಸಂಗ್ರಹಾಲಯಗಳು ಸಹಕಾರಿಯಾಗಿದೆ ಎಂದರು.
ವಸ್ತು ಸಂಗ್ರಹಾಲಯದಲ್ಲಿ ಹಳೇ ವಸ್ತುಗಳ ಸಂಗ್ರಹಣೆಯ ಜೊತೆಗೆ ಅದರ ಸಂರಕ್ಷಣೆಯು ಅಗತ್ಯವಾಗಿದ್ದು, ಡಾ. ತುಕಾರಾಮ್ ಪೂಜಾರಿಯವರ ತುಳು ಬದುಕು ವಸ್ತುಸಂಗ್ರಹಾಲಯದಲ್ಲಿ ರಾಣಿ ಅಬ್ಬಕ್ಕಳ ಸಾಹಸ ಕಥನದ ಚಿತ್ರಗಳ ಜೊತೆಗೆ ತುಳು ಸಂಸ್ಕೃತಿಗೆ ಮರುಜೀವ ತುಂಬುವ ಕಾರ್ಯನಡೆದಿದೆ. ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರೆ, ವಿದ್ವಾಂಸರಿಗೆ ಜ್ಞಾನ ಭಂಡಾರದ ಕೇಂದ್ರ ರೂಪುಗೊಂಡಿದೆ ಎಂದರು.
ತುಳುನಾಡಿನ ವೈವಿಧ್ಯತೆಯ ಬದುಕು ಏಕತೆಕಡೆಗೆ ಹೋಗುತ್ತಿರುವುದರಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದೆ.ಬೇಡವೆಂದು ಮೂಲೆಗೆ ಬೀಸಾಕಿರುವಂತಹ ವಸ್ತುಗಳನ್ನು ಪ್ರಸ್ತುತ ದಿನಗಳಲ್ಲಿನೋಡುವುದೇ ಸೊಬಗು, ಡಾ.ತುಕರಾಂ ಪೂಜಾರಿ ದಂಪತಿ ತಮ್ಮ ಬದುಕನ್ನೇ ವಸ್ತುಸಂಗ್ರಹಾಲದ ಏಳಿಗೆಗೆ ಮೀಸಲಿಟ್ಟಿರುವುದು ಅಭಿನಂದನೀಯ ಎಂದ ಅವರು ಈ ಸಂಗ್ರಹಾಲಯದ ಸಂಪತ್ತು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಕತಾರ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಡಾ.ತುಕರಾಮ್ ಪೂಜಾರಿ ದಂಪತಿಗಳಿಂದ ಕಳೆದ ಮೂರು ದಶಕಗಳ ಪರಿಶ್ರಮ, ಸಾಧನೆ, ಇಚ್ಚಾಶಕ್ತಿಯ ಫಲವಾಗಿ ತುಳುಬದುಕು ವಸ್ತು ಸಂಗ್ರಾಹಾಲಯ ಅದ್ಬುತವಾಗಿ ಮೂಡಿ ಬಂದಿದ್ದು, ತುಳುನಾಡಿನ ಸಮಗ್ರ ಬದುಕು ಇಲ್ಲಿನ ವಸ್ತುಸಂಗ್ರಹಾಲದಲ್ಲಿ ಪರಿಚಯವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತಿಹಾಸ ಸಂಶೋಧಕ, ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಪಿ.ಎನ್. ನರಸಿಂಹಮೂರ್ತಿ ಸರ್ವಾಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಹಿರಿಯ ಇತಿಹಾಸ ಸಂಶೋಧಕ ಡಾ.ಪಿ.ಎನ್. ನರಸಿಂಹಮೂರ್ತಿ ಹಾಗೂ ಎಸ್. ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿಯವರು ಸ್ವಾಗತಿಸಿ, ಪ್ರಸ್ತಾವಿಸುತ್ತಾ ವಿದ್ಯಾರ್ಥಿ ಸಮೂಹ, ಸಹಪಾಠಿಗಳು,ಸ್ಥಳೀಯರ ಸಹಿತ ನೂರಾರು ಮಂದಿಯ ಸಹಕಾರದಿಂದ ಸಂಸ್ಥೆ ಅಭಿವೃದ್ಧಿಯನ್ನು ಕಂಡಿದೆ. ಅಂತರಾಷ್ಟ್ರೀಯಮಟ್ಟದ ಚಿತ್ರಣಗಳು ಕೇಂದ್ರದಲ್ಲಿದ್ದು,ಆಸಕ್ತರು ಮಾತ್ರವಲ್ಲ ಇತಿಹಾಸಕಾರರು ಕೂಡ ಅಧ್ಯಯನಕ್ಕಾಗಿ ದೇಶ, ವಿದೇಶಗಳಿಂದ ಬರುತ್ತಿದ್ದಾರೆ. ವಸ್ತುಸಂಗ್ರಹಾಲಯವನ್ನು ಕೇವಲ ಅಬ್ಬಕ್ಕನ ಗ್ಯಾಲರಿಗೆ ಸೀಮಿತಗೊಳಿಸದೆ ಚರಿತ್ರೆ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಅನೇಕ ಕಣ್ಮರೆಯಾಗುತ್ತಿರುವ ವಸ್ತುಗಳು, ಕುರುಹಗಳನ್ನು ಜತನದಿಂದ ಸಂರಕ್ಷಿಸುವ ಕಾರ್ಯ ಇಲ್ಲಿ ಮಾಡಲಾಗಿದೆ ಎಂದರು. ಕೇಂದ್ರದ ಕಾರ್ಯದರ್ಶಿ ಡಾ.ಆಶಾಲತಾ ಎಸ್.ಸುವರ್ಣ ವಂದಿಸಿದರು. ಪತ್ರಕರ್ತೆ ನವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.