ಬಂಟ್ವಾಳ: ಕಟೀಲು ಮೇಳದ ತಿರುಪತಿ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ದಲಿತ ಸಮುದಾಯವನ್ನು ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು ಯಕ್ಷಗಾನ ಕಲಾವಿದರು ಮಾತಿನ ಭರದಲ್ಲಿ ರಂಗಸ್ಥಳದಲ್ಲಿ ಜಾತಿ ನಿಂದನೆ ಮಾಡಿದ್ದು ಘಟನೆಯನ್ನು ಖಂಡಿಸುವುದಾಗಿ ಬಂಟ್ವಾಳ ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸತೀಶ್ ಅರಳ ತಿಳಿಸಿದ್ದಾರೆ.
ಖ್ಯಾತ ಯಕ್ಷಗಾನ ಕಲಾವಿದರದ ಸುಣ್ಣoಬಳ ವಿಶ್ವೇಶ್ವರ ಭಟ್ ಮತ್ತು ಡಾ. ಮಹೇಶ್ ಸಾಣೂರು ಇವರು ಶ್ರೀ ತಿರುಪತಿ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಬ್ರಾಹ್ಮಣ ಪಾತ್ರ ಮತ್ತು ದಲಿತ ಪಾತ್ರ ಮಾಡಿ ಸಂಭಾಷಣೆಯ ಸಂದರ್ಭದಲ್ಲಿ ದಲಿತರಿಗೆ ಅಪಮಾನ ಆಗುವ ರೀತಿಯಲ್ಲಿ ಚಿತ್ರಿಸಿ ಅತ್ಯಂತ ಕೀಳು ಮಟ್ಟದ ಪದ ಬಳಕೆ ಮಾಡಿ ಜಾತಿ ನಿಂದನೆಯನ್ನು ಮಾಡಿರುವುದಾಗಿ ಆರೋಪಿಸಿದ್ದಾರೆ. ಜಾತಿಯ ಹೆಸರನ್ನು ಅತ್ಯಂತ ಕೀಳು ಅರ್ಥ ಬರುವ ರೀತಿಯಲ್ಲಿ ವರ್ಣನೆ ಮಾಡಿರುವ ವಿಡಿಯೋ ತುಣುಕು ಪ್ರಸ್ತುತ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು ದಲಿತ ಸಮುದಾಯದಿಂದ ಖಂಡನೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ್ ಅಸ್ರಣ ಅವರನ್ನು ಭೇಟಿಯಾಗಿ ಈ ವಿಚಾರವನ್ನು ಚರ್ಚೆ ಮಾಡಿದ್ದು ಕಲಾವಿದರ ಪರವಾಗಿ ಗಿ ಕ್ಷಮೆ ಯಾಚಿಸಿ ಮುಂದಿನ ದಿನಗಳಲ್ಲಿ ಕಲಾವಿದರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದಾಗಿ ಅಸ್ರಣ್ಣರು ಭರವಸೆ ನೀಡಿದ್ದಾರೆ ಎಂದು ಸತೀಶ್ ಅರಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.