ಬಂಟ್ವಾಳ: ಸೋಮಯ್ಯ ವಿದ್ಯಾವಿಹಾರ್ ಯೂನಿವರ್ಸಿಟಿ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ಫೆ. ೯ ರಂದು ಮುಂಬೈನಲ್ಲಿ ಜರುಗಿದ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಸಹೋದರಿಯರಿಬ್ಬರು ಬಹುಮಾನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸಿದ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆತ್ತರಕೆರೆ ಇಲ್ಲಿಯ ವಿದ್ಯಾರ್ಥಿನಿಯರಾದ ಏಳನೇ ತರಗತಿಯ ಹಂಸಿಕಾ ಹಾಗೂ ಆಕೆಯ ಸಹೋದರಿ ಒಂದನೇ ತರಗತಿಯ ಭೂಮಿಕ ಸ್ಕೇಟಿಂಗ್ನಲ್ಲಿ ಬಹುಮಾನವನ್ನು ಗೆದ್ದುಕೊಂಡ ಕ್ರೀಡಾಪಟುಗಳಾಗಿದ್ದಾರೆ. ೧೨ ವರ್ಷಕಿಂತ ಕೆಳಗಿನ ವಯೋಮಾನದ ವಿದ್ಯಾರ್ಥಿಗಳಿಗೆ ನಡೆದ ಸ್ಕೇಟಿಂಗ್ನಲ್ಲಿ ಹಂಸಿಕಾ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ೭ನೇ ವರ್ಷಕ್ಕಿಂತ ಕೆಳಗಿನ ವಯೋಮಾನದ ವಿದ್ಯಾರ್ಥಿಗಳಿಗೆ ನಡೆದ ಸ್ಕೇಟಿಂಗ್ನಲ್ಲಿ ಭೂಮಿಕಾ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡು ಸಾಧನೆ ಮಾಡಿದ್ದಾರೆ.
ಇವರು ನೆತ್ತರೆಕೆರೆ ನಿವಾಸಿಗಳಾದ ರಾಜೇಶ್ ಹಾಗು ಶೋಭಾ ದಂಪತಿಯ ಸುಪುತ್ರಿಯಾಗಿದ್ದು ಪೊಳಲಿ ಶ್ರೀ ರಾಮಕೃಷ್ಣ ಆಶ್ರಮ ತಪೋವನದಲ್ಲಿ ತರಬೇತುದಾರರಾದ ಎನ್ಐಟಿಕೆ ವಿದ್ಯಾರ್ಥಿನಿ ವೆನಿಲ್ಲಾ ಮಣಿಕಂಠ ಇವರ ಬಳಿ ತರಬೇತಿಯನ್ನು ಪಡೆಯುತಿದ್ದರೆ. ಸಹೋದರಿಯರ ಸಾಧನೆಯನ್ನು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿಯವರು ಅಭಿನಂದಿಸಿದ್ದಾರೆ.