ಬಂಟ್ವಾಳ: ದೇವಸ್ಥಾನಗಳು ಆಧ್ಯಾತ್ಮಕ್ಕೆ ಮಾತ್ರ ಸೀಮಿತವಾಗ ಬಾರದು. ಭಗವಾನ್ ಶ್ರೀ ನಿತ್ಯಾನಂದರು ಸಾಮಾಜಿಕ ಆಂದೋಲನ ಮಾಡಿದವರಾಗಿದ್ದು ದೇವಸ್ಥಾನಗಳು ಅವರ ಚಿಂತನೆಯ ಹಾದಿಯಲ್ಲಿಯೇ ಸಾಗಬೇಕಿದೆ ಎಂದು ಕೊಪ್ಪ ಗೌರಿಗದ್ದೆಯ ಶ್ರೀ ದತ್ತಾಶ್ರಮ ಸ್ವರ್ಣಪೀಠಿಕಾಪುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.
ಬಂಟ್ವಾಳ ಬೈಪಾಸ್ನಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ನ ಸುವರ್ಣ ಮಹೋತ್ಸವದ ವರ್ಷಚರಣೆ ಪ್ರಯುಕ್ತ ನೂತನ ಮಂದಿರ ಲೋಕಾರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹದ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮಕ್ಕೆ ನಿವೃತ್ತಿ ಇಲ್ಲ, ಪರರ ಸೇವೆಗಾಗಿ ಬದುಕಿದಾಗ ನಮಗೆ ಆತ್ಮತೃಪ್ತಿ ಸಿಗುತ್ತದೆ. ನಾವು ಎಲ್ಲವನ್ನೂ ದೇವರಲ್ಲಿ ಕೇಳುತ್ತಿದ್ದೇವೆ ವಿನಃ ದೇವರ ತರ ಬದುಕುತ್ತಿಲ್ಲ ಎಂದು ತಿಳಿಸಿದರು.
ಮಂದಿರ ನಿರ್ಮಾಣದಲ್ಲಿ ಸ್ವಯಂ ಸೇವಕರ ಶ್ರಮ ಕಾಣುತ್ತಿದೆ. ದೇವಸ್ಥಾನ ನಿರ್ಮಾಣ ಪುಣ್ಯದ ಕೆಲಸವಾಗಿದ್ದು ದೇವಸ್ಥಾನ, ಅನ್ನದಾನ, ಗೋಶಾಲೆ ನಿರ್ಮಾಣಮಾಗಬೇಕಾದರೆ ನಾವು ಪುಣ್ಯ ಮಾಡಿರಬೇಕು ಎಂದು ತಿಳಿಸಿದರು.
ಬಂಟ್ವಾಳದಲ್ಲಿ ಮೂರು ಭಗವಾನ್ ಶ್ರೀ ನಿತ್ಯಾನಂದರ ಮಂದಿರ ಇರುವುದು ತ್ರಿಮೂರ್ತಿಗಳ ಚೈತನ್ಯವಿದ್ದಂತಿದೆ. ಬಂಟ್ವಾಳ ಎಂದರೆ ಕಾಶಿ ಎಂದು ಭಗವಾನ್ ಹೇಳಿದ್ದಾರೆ, ಭಗವಾನರು ಬಂಟ್ವಾಳದಲ್ಲಿ ನೀರರಿನ ಮೇಲೆ ನಡೆದು ಪವಾಡ ಮಾಡಿದ್ದಾರೆ. ಸನಾತನ ಧರ್ಮಕ್ಕೆ ಬಂಟ್ವಾಳ ಸಾಕ್ಷಿಯಾಗಿದೆ. ನಾಥ ಪಂಥದ ಜ್ವಾಲಾನಾಥರು ಇಲ್ಲಿ ತಪ್ಪಸ್ಸು ಮಾಡಿದ್ದರು ಇಲ್ಲಿನ ಹುಡುಗರು ಧರ್ಮಕ್ಕಾಗಿ ತ್ಯಾಗ ಮಾಡಿದವರು ಎಂದು ತಿಳಿಸಿದರು.
ದೇವರು ಸೇವೆಯನ್ನು ಬಿಟ್ಟು ಚಿನ್ನಾಭsರಣವನ್ನು ಎಂದಿಗೂ ಕೇಳಿಲ್ಲ. ದೇವಸ್ಥಾನದ ಮೂಲಕ ಆಸ್ಪತ್ರೆ ಶಾಲೆಯನ್ನು ನಿರ್ಮಿಸಬೇಕಾಗಿದೆ. ಸಾಮೂಹಿಕ ವಿವಾಹಗಳು ಬಡಕುಟುಂಬದ ಕಣ್ಣೀರನ್ನು ಒರೆಸುವ ಕಾರ್ಯವಾಗಿದೆ. ಧರ್ಮಕ್ಕಾಗಿ ಕೆಲಸ ಮಾಡುವ ಯುವಕರಿಗೆ ಹಣ ತೆಗೆದಿಡುವ ಆಂದೋಲನ ಬಂಟ್ವಾಳದಿಂದ ಆರಂಭವಾಗಬೇಕಾಗಿದೆ ಎಂದು ತಿಳಿಸಿದರು. ಶಾಸಕ ರಾಜೇಶ್ ನಾಕ್ ಮಾತನಾಡಿ ಭಗವಾನ್ ನಿತ್ಯಾನಂದರಿಗೆ ಸುಂದರವಾದ ಮಂದಿರ ನಿರ್ಮಾಣಗೊಂಡಿದೆ. ಬಂಟ್ವಾಳ ದೈವ ದೇವರುಗಳ ಆರಾಧನ ಕೇಂದ್ರವಾಗಿದ್ದು ತನ್ನ ಅಧಿಕಾರವಧಿಯಲ್ಲಿ ದೇವಸ್ಥಾನ, ದೈವಸ್ಥಾನಗಳಿಗೆ ಸಂಪರ್ಕಿಸುವ ರಸ್ತೆಗಳಿಗೆ ಕಾಯಕಲ್ಪ ನೀಡಲಾಗಿದೆ, ಶಾಸಕನಾಗಿ ಮಾಡಿದ ಕೆಲಸಗಳು ತೃಪ್ತಿ ನೀಡಿದೆ ಎಂದರು. ಮಾಜಿ ಸಚಿವ, ಕಾಂಞಗಾಡ್ ಶ್ರೀ ನಿತ್ಯಾನಂದ ಆಶ್ರಮದ ಟ್ರಸ್ಟಿ ಬಿ. ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿ ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿಮಾಚಲದ ವಿಜಯಾನಂದ ಮಹಾಂತ, ಕಾಞಂಗಾಡ್ ಗುರುವನದ ಶ್ರೀ ವಿದ್ಯಾನಂದ ಭಾರತಿ, ನಿತ್ಯಾನಂದ ಸ್ವಾಮೀಜಿ ವಿದ್ಯಾಕೇಂದ್ರದ ಚೇರರಮ್ಯಾನ್ ದಿವಾಕರ ಶೆಟ್ಟಿ ಕೊಡವೂರು, ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲು, ಉದ್ಯಮಿಗಳಾದ ಆನಂದ ಶೆಟ್ಟಿ, ಕುಮಾರ ಬಂಗೇರ, ಪ್ರಮುಖರಾದ ಡಾ. ವಿದ್ಯಾಧರ ಶಿವರಾಮ್ ಕರಿ, ನಿರಂಜನ್ ಸುವರ್ಣ, ವೇಣುಗೋಪಾಲ ಕದ್ರಿ, ಸುಲೋಚನಾ ಶ್ರೀನಿವಾಸ ಪೂಜಾರಿ, ವಿಠಲ ಶೆಟ್ಟಿಗಾರ್, ಹೆಚ್. ರಾಮರಾಯ ಕಿಣಿ, ಭೂಪೇಂದ್ರ ಬಾಖಡಾ, ನಿತಿನ್ ಬಾಲನ್, ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಬಿ.ಹರೀಶ್ ಶೆಟ್ಟಿ, ಸಿವಿಲ್ ಗುತ್ತಿಗೆದಾರ ಉದಯ ಕುಮಾರ್ ರಾವ್, ಉದ್ಯಮಿ ನಾಗೇಶ್ ಸಾಲ್ಯಾನ್, ರವಿ ನಾಯಕ್, ಮಲ್ಲೇಶ್, ವಿಗ್ರಹ ತಯಾರಕ ನಂದಕಿಶೋರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್ ಭಂಡಾರಿ ಸ್ವಾಗತಿಸಿದರು, ಜಯಪ್ರಕಾಶ್ ಜೆ.ಎಸ್.ವಂದಿಸಿದರು, ದಾಮೋದರ ಶರ್ಮ ಹಾಗೂ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಗುರುದ್ವಯರ ಮೂರ್ತಿ ಪ್ರತಿಷ್ಠೆ:
ಬೆಳಿಗ್ಗೆ 9.50ರ ಮೀನ ಲಗ್ನ ಸುಮುಹೂರ್ತದಲ್ಲಿ ಗುರುದ್ವಯರ ಮೂರ್ತಿ ಪ್ರತಿಷ್ಠೆ, ನಿದ್ರಾಕಲಶ ಅಭಿಷೇಕ, ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು.