
ಬಂಟ್ವಾಳ: ಬಂಟ್ವಾಳವೂ ಸೇರಿದಂತೆ ಕರಾವಳಿ ಆತಂಕದ ದಿನಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಪಾದಯಾತ್ರೆ ಮಾಡಿ ಚುನಾವಣೆಯಲ್ಲಿ ಗೆದ್ದು ನಾಲ್ಕೂವರೆ ವರ್ಷದ ಅವಧಿಯಲ್ಲಿ ಬಂಟ್ವಾಳದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ನಡಿಗೆ- ಗ್ರಾಮದೆಡೆಗೆ ಶಾಸಕರ ನಡಿಯ 12ನೇ ದಿನದ ಪಾದಯಾತ್ರೆಯ ಬಳಿಕ ಕಳ್ಳಿಗೆ ಗ್ರಾಮದ ಕುರಿಯಾಳ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಹಿಂದೆ ಗಲಭೆ ಪೀಡಿತ ಬಂಟ್ವಾಳದಲ್ಲಿ ತಹಶೀಲ್ದಾರರ ಕಚೇರಿ ಮುಂದೆ ಹೋರಾಟ ಮಾಡಿದ ನೆನಪಿದೆ, ಅಂತಹ ಬಂಟ್ವಾಳ ಇಂದು ಅದೆಷ್ಟು ಬದಲಾಗಿದೆ. ರಾಜೇಶ್ ನಾಯ್ಕ್ ಕಾನೂನನ್ನು ಮೀರಿ ಏನನ್ನು ಮಾಡಿಲ್ಲ, ಅನ್ಯಾಯ ಆದಾಗ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ತನ್ನ ಕ್ಷೇತ್ರದ ಕಟ್ಟಕಡೆಯ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಅದು ಅವರ ರಾಜಧರ್ಮ ಎಂದರು. ಚುನಾವಣೆ ಸಮೀಪಿಸುವಾಗ ಸುಳ್ಳು ಭರವಸೆ ನೀಡುವುದು ಕಾಂಗ್ರೆಸ್ ನ ಸ್ವಭಾವ. ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲದಿದ್ದರೂ ಕೂಡ ಭರವಸೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ 12 ದಿನದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದ್ದು ಯಶಸ್ಸಿಗಾಗಿ ಸಹಕರಿಸಿದ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸಿದರು. ಜ. 27 ರಂದು ಬಿ.ಸಿ.ರೋಡಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಮಾತನಾಡಿ ಗಾಂಧಿಜಿಯವರ ರಾಮರಾಜ್ಯದ ಕನಸನ್ನು ಬಿಜೆಪಿ ನನಸು ಮಾಡಿದೆ. ದೇಶದ ಸ್ವಾತಂತ್ರಕ್ಕಾಗಿ ರಚನೆಯಾಗಿದ್ದ ಕಾಂಗ್ರೆಸ ನ್ನು ವಿಸರ್ಜಿಸುವಂತೆ ಗಾಂಧೀಜಿ ಸಲಹೆ ನೀಡಿದರೂ ರಾಜಕೀಯ ಪಕ್ಷವಾಗಿ ಮಾಡಿ ಗಾಂಧಿಯ ಕನಸನ್ನು ಕಾಂಗ್ರೆಸ್ ನುಚ್ಚುನೂರು ಮಾಡಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕ.ನ.ನೀ.ಸ.ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾ ಭಟ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ರೋಶನ್ ಡಿಸೋಜಾ, ಕಳ್ಳಿಗೆ ಗ್ರಾ.ಪಂ. ಅಧ್ಯಕ್ಷೆ ಯಶೋಧ ದಯಾನಂದ, ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷ ವಾಮನ ಆಚಾರ್ಯ
ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಕ್ಷೇತ್ರದ ಅನುದಾನ, ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ಸುರೇಶ್ ಕೋಟ್ಯಾನ್ ನಿರೂಪಿಸಿ, ವಂದಿಸಿದರು.