ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಯಕ್ಷ ಮಿತ್ರರು ಆಶ್ರಯದಲ್ಲಿ ಭಾನುವಾರ ರಾತ್ರಿ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಹೊರಾಂಗಣದಲ್ಲಿ ೧೪ನೇ ವರ್ಷದ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಬಿ.ಸಿ.ರೋಡಿನ ಸಿವಿಲ್ ಇಂಜಿನಿಯರ್ ಸುಧೀರ್ ಶೆಟ್ಟಿ ಅವರು ಖ್ಯಾತ ಚೆಂಡೆ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರನ್ನು ಸನ್ಮಾನಿಸಿದರು.
ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಅಭಿನಂದನಾ ಭಾಷಣಗೈದು ಯಕ್ಷಮಿತ್ರರು ಇದೇ ಮೊದಲಿಗೆ ಹಿಮ್ಮೇಳ ಕಲಾವಿದರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನೀಯವಾಗಿದೆ. ದೇಲಂತಮಜಲು ಸುಬ್ರಹ್ಮಣ್ಣ ಭಟ್ ಅವರು ಕಳೆದ ೪೦ ವರ್ಷಗಳಿಂದ ಯಕ್ಷಗಾನ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ .ಹಿಮ್ಮೇಳ ಕಲಾವಿದ ಮಾತ್ರವಲ್ಲ ನಾಟ್ಯದಲ್ಲೂ ಪ್ರವೀಣರು ಆಗಿದ್ದಾರೆ ಎಂದರು.
ಹಿರಿಯ ಕಲಾವಿದ ಗೋವಿಂದ ಭಟ್ , ಯಕ್ಷಮಿತ್ರರು ಸದಸ್ಯರಾದ ಸದಾಶಿವ ಕೈಕಂಬ, ಶಂಕರ ಶೆಟ್ಟಿ, ವಿಶ್ವನಾಥ, ಭುಜಂಗ ಸಾಲಿಯಾನ್, ಸದಾನಂದ ಶೆಟ್ಟಿ ವೇದಿಕೆಯಲ್ಲಿದ್ದರು.
ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಭಾರತ ಜನನಿ ಎಂಬ ಯಕ್ಷಗಾನ ಬಯಲಾಟವು ನಡೆಯಿತು.