ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಭೇಟಿ ನೀಡಿ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದರು. ಫೆ.8ರಿಂದ 10ರತನಕ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ನೆರವು ನೀಡುವುದಾಗಿ ಅವರು ತಿಳಿಸಿದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾತನಾಡಿ, ಕಳೆದ 2006ರಲ್ಲಿ ಕೇವಲ ಗರ್ಭಗುಡಿ ನಿರ್ಮಿಸಿ ದೇವರ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆದಿದೆ. ಇದೀಗ ಸುತ್ತುಗೋಪುರ ನಿರ್ಮಾಣ ಸಹಿತ ಗಣಪತಿ ಗುಡಿ, ಗುರು ರಾಘವೇಂದ್ರ ಸ್ವಾಮಿ ಗುಡಿ ಮತ್ತು ಪರಿವಾರ ದೈವಗಳಿಗೆ ಗುಡಿ ನಿರ್ಮಾಣಗೊಂಡಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಬಾಬು ಕುಲಾಲ್ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ ಎಂದರು.
ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಪ್ರಮುಖರಾದ ಬೇಬಿ ಕುಂದರ್, ಕರ್ಣ ಚಂದ್ರಶೇಖರ್, ಪ್ರಭಾಕರ ಪೂಜಾರಿ, ಅಭಿಷೇಕ್ ಗಾಣಿಗ ಮತ್ತಿತರರು ಇದ್ದರು.