ಬಂಟ್ವಾಳ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ತನ್ನ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಬಳಿ ಹೋದ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 7ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಸರಪಾಡಿ ಗ್ರಾಮದ ಶ್ರೀ ಶರಭೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ಧಿಯೊಂದಿಗೆ ಶಕ್ತಿ ಶಾಲಿಯಾದ ದೇಶ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಂದೆ ಅರ್ಜಿ ಹಾಕದೆ ಯಾವುದೇ ಯೋಜನೆ ಭಾರತದಲ್ಲಿ ಸಿಗುತ್ತಿರಲಿಲ್ಲ. ಆದರೆ ಅರ್ಜಿ ಹಾಕದೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 10 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಬಂದಿದೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರ ರೈತ ಪರವಾಗಿ ಕೆಲಸ ಮಾಡಿದೆ ಎಂದರು.
ಕರ್ನಾಟಕದ 12 ಲಕ್ಷ ಟೈಲರ್ ಗಳ ಮಕ್ಕಳಿಗೂ ವಿದ್ಯಾನಿಧಿ ಕೊಡಲು ಸರಕಾರ ತೀರ್ಮಾನಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಮೂಲಕ 23 ಲಕ್ಷ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಿದ್ದೇವೆ. ಸರಕಾರಿ ನೌಕರರು ಮಾತ್ರವಲ್ಲದೆ ಎಲ್ಲಾ ಬಡವರಿಗೂ ಸಂಧ್ಯಾ ಸುರಕ್ಷಾ ಯೋಜನೆಯ ಮೂಲಕ ಪಿಂಚಣಿ ನೀಡಲಾಗಿದೆ. ಪರಿಶಿಷ್ಟ ಜಾತಿ ಪಂಗಡದವರೆ ಮೀಸಲಾತಿ ಗೆ ಅನುಗುಣವಾಗಿ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು. ಭಯೋತ್ಪಾದನೆಯನ್ನು ಸಮರ್ಥಿಸುವ ಕಾಂಗ್ರೆಸ್ ನ ನಿಲುವೇನು ಎನ್ನುವುದನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ. ಮುಂದಿನ ಚುನಾವಣೆ ದೇಶದ ಭದ್ರತೆ, ಸಮಗ್ರತೆ ಹಾಗೂ ಭಯೋತ್ಪಾದನೆಯ ವಿರುದ್ದ ನಡೆಯುವ ಚುನಾವಣೆ ಎಂದು ಬಣ್ಣಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಕಾಂಗ್ರೆಸನ್ನು ಗೆಲ್ಲಿಸಿದರೆ 200 ಯುನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ 2 ಸಾವಿರ ಹಣವನ್ನು ಕೊಡುವುದಾಗಿ ಹೇಳಿದ್ದಾರೆ. ಛತ್ತಿಸಗಡದ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದಂತೆ ಯುವತಿಯರಿಗೆ ರೂ.2500 ನಿರುದ್ಯೋಗ ಭತ್ತೆ ನೀಡುವುದಾಗಿ ಹೇಳಿ ನಯಾಪೈಸೆ ಕೊಟ್ಟಿಲ್ಲ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ 25 ಸಾವಿರ ಮತದ ಅಂತರದಿಂದ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ರೂ. 1925 ಕೋಟಿಗೂ ಮಿಕ್ಕಿದ ಅನುದಾನ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ. 4 ಹಿಂದುಳಿದ ಸಮಾಜದ ಸಮುದಾಯ ಭವನಕ್ಕೆ 1 ಕೋಟಿ ರೂ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುದಾನ ಬಂದಿದೆ. ಇನ್ನಷ್ಟು ಸಮುದಾಯಗಳ ಅಭಿವೃದ್ದಿಗೂ ಅನುದಾನದ ಬೇಡಿಕೆ ಇದ್ದು ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಗ್ರಾಮ ವಿಕಾಸ ಯಾತ್ರೆಯ ಸಹ ಸಂಚಾಲಕರಾದ ಮಾಧವ ಮಾವೆ, ಸುದರ್ಶನ ಬಜ, ಸರಪಾಡಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ, ಬಂಟ್ವಾಳ ಪುರಸಭಾ ಸದಸ್ಯರಾದ ಮೀನಾಕ್ಷಿ ಗೌಡ, ಶಶಿಕಲಾ, ರೇಖಾ ಪೈ, ದೇವಕಿ ಉಪಸ್ಥಿತರಿದ್ದರು.
ಸರಪಾಡಿ ಗ್ರಾ.ಪಂ. ಸದಸ್ಯ ಧನಂಜಯ ಶೆಟ್ಟಿ ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಂಟ್ವಾಳದ ಶ್ರೀ ತಿರುಮಲ ವೆಂಟರಮಣ ದೇವಸ್ಥನದಿಂದ ಆರಂಭಗೊಂಡ ಗ್ರಾಮ ವಿಕಾಸ ಪಾದಯಾತ್ರೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನವನ್ನು ತಲುಪಿತು.