ಬಂಟ್ವಾಳ: ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ 13 ದಿನಗಳ ಕಾಲ ನಡೆಯುವ ಗ್ರಾಮ ವಿಕಾಸ ಯಾತ್ರೆ ಗ್ರಾಮದೆಡೆ ಶಾಸಕರ ನಡಿಗೆಗೆ ಜ.14 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀಕ್ಷೇತ್ರ ಪೊಳಲಿಯ ವಠಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಲಿದ್ದಾರೆ ಎಂದು ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ಬಿ.ದೇವದಾಸ ಶೆಟ್ಟಿ ಅವರು ತಿಳಿಸಿದರು.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಜ.26ರಂದು ಮಧ್ಯಾಹ್ನ ಬಿ.ಸಿ.ರೋಡಿನಲ್ಲಿ ಶಾಸಕರ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಅಂದು ಮುಖ್ಯಂಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಕಂದಾಯ ಸಚಿವ ಆರ್ .ಅಶೋಕ್ ಸಹಿತ ಪಕ್ಷದ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಸಂಘಟನೆ ಮತ್ತು ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿಗೆ ಪೂರಕವಾಗಿ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದ 59 ಗ್ರಾಮಗಳ ಪೈಕಿ 58 ಗ್ರಾಮಗಳಿಗೂ ಪಾದಯಾತ್ರೆಯ ಮೂಲಕ ಭೇಟಿ ನೀಡಿ ಗ್ರಾಮಸ್ಥರು, ಕಾರ್ಯಕರ್ತರು, ಸರಕಾರದ ವಿವಿಧ ಯೋಜನೆಯಲ್ಲಿ ಸವಲತ್ತು ಪಡೆದಿರುವ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಎರಡು ಬಾರಿ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪಾದಯಾತ್ರೆಯ ಮೂಲಕವೇ ಸಂಚರಿಸಿ ಜನರ ಮನಗೆದ್ದಿದ್ದರು. ಆಗ ಅವರ ಬಂಟ್ವಾಳ ಕ್ಷೇತ್ರದ ಶಾಸಕರಾಗಿರಲಿಲ್ಲ, ಪ್ರಸ್ತುತ ಅವರು ಬಂಟ್ವಾಳ ಕ್ಷೇತ್ರದ ಶಾಸಕರು, ಈ ಬಾರಿ ಅವರು ತನ್ನ ಶಾಸಕತ್ವದ ಅವಧಿಯಲ್ಲಿ ವಿವಿಧ ಯೋಜನೆಯಲ್ಲಿ 1800 ಕೋ.ರೂ. ವಿನ ಅನುದಾನವನ್ನು ಕ್ಷೇತ್ರಕ್ಕೆ ತಂದು ಹತ್ತು ಹಲವು ಅಭಿವೃದ್ಧಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಜಕ್ರಿಬೆಟ್ಟುವಿನಲ್ಲಿ ಬಂಟ್ವಾಳ-ನರಿಕೊಂಬು ಸಂಪರ್ಕಿಸಲು 135 ಕೋ.ರೂ.ವೆಚ್ಚದ ಅಣೆಕಟ್ಟು ಮತ್ತು ಸಂಪರ್ಕರಸ್ತೆಯ ಕಾಮಗಾರಿ ಆರಂಭವಾಗಿದೆ. 1473 ರಸ್ತೆಗಳು ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು, ಶೇ. 80 ರಷ್ಟು ರಸ್ತೆಗಳು ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ 54 ಕೋ.ರೂ.ವೆಚ್ಚದ ಯುಜಿಡಿ ಟೆಂಡರ್ ಹಂತದಲ್ಲಿದೆ.ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಶಾಸಕರ ಪರಿಶ್ರಮದಿಂದ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಸಾಲೆ ಮಂಜೂರುಗೊಂಡಿದೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನಪರವಾದ ಯೋಜನೆಗಳು ಬಂಟ್ವಾಳ ಕ್ಷೇತ್ರದ ಸಾವಿರಾರು ಜನರಿಗೆ ತಲುಪಿದೆ. ಯೋಜನೆಯ ಫಲಾನುಭವಿಗಳನ್ನು ಮತ್ತು ತಳಮಟ್ಟದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಖುದ್ದು ಭೇಟಿಯಾಗಿ ಸಮಾಲೋಚನೆ ನಡೆಸುವುದು ಹಾಗೂ ಪಕ್ಷದ ಸಂಘಟನೆಯ ದೃಷ್ಟಿಯಿಂದ ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಿಕಾಸ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಾರಿ ವಿಶೇಷವಾಗಿ ಒಂದು ಧಾರ್ಮಿಕ ಕ್ಷೇತ್ರದಿಂದ ಬೆಳಿಗ್ಗೆ ಪಾದಯಾತ್ರೆ ಆರಂಭಗೊಂಡು ಸಂಜೆ ಇನ್ನೊಂದು ಧಾರ್ಮಿಕ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ. ರಾತ್ರಿ ಶಾಸಕರು ಪಕ್ಷದ ಕಾರ್ಯಕರ್ತರೋರ್ವರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ದಿನವೊಂದಕ್ಕೆ 30ಕಿ.ಮೀ.ನಷ್ಟು ಪಾದಯಾತ್ರೆಯಲ್ಲಿ ಶಾಸಕರು ಸಂಚರಿಸಲಿದ್ದು,ಈ ಸಂದರ್ಭದಲ್ಲಿ ಗ್ರಾಮಸ್ಥರು ,ಕಾರ್ಯಕರ್ತರು, ಫಲಾನುಭವಿಗಳನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರುಗಳಾದ ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಅಂಗಾರ, ಡಾ.ಅಶ್ವಥನಾರಾಯಣ, ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ, ಶಾಸಕರುಗಳಾದ ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸಹಿತ ಹಲವಾರು ನಾಯಕರು ದಿನವೊಂದರಂತೆ ಸಂಜೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ದೇವದಾಸ ಶೆಟ್ಟಿ ವಿವರಿಸಿದರು.
ಪಾದಯಾತ್ರೆಯ ಜೊತೆಯಲ್ಲೇ ಬೂತ್ ಧ್ವಜ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ ಸಹಿತ ಪಕ್ಷ ಸಂಘಟನೆಗೆ ಪೂರಕವಾದ ಕಾರ್ಯಕ್ರಮಗಳು ನಡೆಯಲಿದೆ. ಪಾದೆಯಾತ್ರೆ ಸಂಪನ್ನಗೊಂಡ ಬಳಿಕ ಕೆಲಗ್ರಾಮಗಳಲ್ಲಿ ಕಾರ್ಯಕರ್ತರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದ ಅವರು ಬಿಜೆಪಿ ಬಂಟ್ವಾಳ ಮಂಡಲದ ಸಹಿತ ವಿವಿಧ ಮೋರ್ಛಾದ ಕಾರ್ಯಕರ್ತರು, ಪ್ರಮುಖರು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಯವರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದರು. ಈ ಬಾರಿ ವಿಶೇಷವಾಗಿ ರಾಜೇಶ್ ನಾಕ್ ಅವರ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಎಲ್. ಇ .ಡಿ ಪರದೆಯ ಮೂಲಕ ಪ್ರಚುರ ಪಡಿಸಲಾಗಿವುದು, ಅದೇ ರೀತಿ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಬಳಸಿದ ವಿನೂತನವಾಗಿ ತಯಾರಿಸಲಾದ ತೆರೆದ ವಾಹನ ಪಾದಯಾತ್ರೆಯಲ್ಲಿ ಗಮನಸೆಳೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಕ್, ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಮಾಧವ ಮಾವೆ, ಸುಲೋಚನಾ ಜಿ.ಕೆ.ಭಟ್, ಸುದರ್ಶನ್ ಬಜ, ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ರಮಾನಾಥರಾಯಿ, ಪುರುಷೋತ್ತಮ ಶೆಟ್ಟಿ, ರೋನಾಲ್ಡ್ ಡಿಸೋಜ, ದೇವಿಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.