ಬಂಟ್ವಾಳ: ಸಮಾಜದಿಂದ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಮತ್ತೆ ಸಮಾಜಕ್ಕೆ ಮರಳಿಸುವ ಭಾಗವಾಗಿ ಅದನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕಾಗಿ ವ್ಯಯಿಸುತ್ತಿರುವ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿ ವಾಣಿಜ್ಯ ಸಂಸ್ಥೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಹೇಳಿದರು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಇದರ ಬಂಟ್ವಾಳ ಶಾಖಾ ವತಿಯಿಂದ ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಗುರುವಾರ ನಡೆದ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಧಿ ವಿತರಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳು ಶೈಕ್ಷಣಿಕ ಉದ್ದೇಶಕ್ಕಾಗಿ ನೀಡುವ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಸಮಪರ್ಕವಾಗಿ ಬಳಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಬಂಟ್ವಾಳದಲ್ಲಿ ಸರಕಾರಿ ಶಾಲೆಗಳ ಅಭಿವೃದ್ದಿ ದೃಷ್ಟಿಯಿಂದ ಪ್ರತಿ ಶಾಲೆಗಳಲ್ಲೂ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಆ ಮೂಲಕ ಶಾಲೆಯ ಅಭಿವೃದ್ದಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯಕ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿ ನಿಧಿ ಪಡೆದ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಹಾಗೂ ಗೌರವಯುತ ನಾಗರಿಕರಾಗಿ ಬೆಳೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ಉತ್ತಮ ನಾಗರಿಕ ಸಮಾಜ ಕಟ್ಟಲು ಕಟಿಬದ್ದರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಹಿರಿಯ ಸಾಹಿತಿ ನೇಮು ಪೂಜಾರಿ, ನಿವೃತ್ತ ಅಧ್ಯಾಪಕ ನಾರಾಯಣ ನಾಯ್ಕ, ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ರೈ, ಉಮೇಶ್ ಕುಮಾರ್ ವೈ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ, ಬಂಟ್ವಾಳ ಕಾಂಚನಾ ಹೋಂಡಾ ಮ್ಯಾನೇಜರ್ ರಕ್ಷಿತ್, ಹೋಟೆಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿ, ಸಂಸ್ಥೆಯ ಸ್ಟೇಟ್ ಹೆಡ್ ಸದಾಶಿವ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ಬಿ ಸಿ ರೋಡು ಶಾಖಾಧಿಕಾರಿ ಪುನೀತ್ ಕುಮಾರ್, ಶಾಖಾ ರಿಕವರಿ ಹೆಡ್ ಲತೀಶ್ ಶೆಟ್ಟಿ ಎನ್ ಹಾಗೂ ಶಾಖಾ ಕಲೆಕ್ಷನ್ ಹೆಡ್ ಪದ್ಮನಾಭ ನಾಯ್ಕ್, ಆರ್ ಬಿ ಎಚ್ ಮಹೇಶ್ ಕುಮಾರ್ ಸಿ ಎಚ್, ರೀಜನಲ್ ಸೇಲ್ಸ್ ಹೆಡ್ ಚಂದ್ರಹಾಸ ಆಳ್ವ ಹಾಗೂ ಪ್ರಸಾದ್ ಎಂ ಜಿ, ರೀಜನಲ್ ಲೀಗಲ್ ಹೆಡ್ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು. ಕಂಪೆನಿಯ ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿ, ರೀಜನಲ್ ಕಲೆಕ್ಷನ್ ಹೆಡ್ ಪ್ರಮೋದ್ ಅಂಚನ್ ವಂದಿಸಿದರು. ನಿವೃತ್ತ ಶಿಕ್ಷಕ ಬಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಅಶೋಕ್ ಶೆಟ್ಟಿ ಸರಪಾಡಿ, ನೇಮು ಪೂಜಾರಿ, ನಾರಾಯಣ ನಾಯ್ಕ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 89 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 3,500 ರಂತೆ 3.11 ಲಕ್ಷ ರೂಪಾಯಿ ಹಾಗೂ 152 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ 4.56 ಲಕ್ಷ ರೂಪಾಯಿ ಸೇರಿ ಒಟ್ಟು 241 ಮಂದಿ ವಿದ್ಯಾರ್ಥಿಗಳಿಗೆ 7.67 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿಯನ್ನು ಗಣ್ಯರು ವಿತರಿಸಿದರು.