ಬಂಟ್ವಾಳ: ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ವ್ಯವಹಾರ ಕ್ಷೇತ್ರಕ್ಕೆ ಕಾಲಿಟ್ಟ ಮಹಿಳೆಯೋರ್ವರು ತನ್ನ ವ್ಯಾಪರ ನಡೆಸುವ ಅಂಗಡಿಯನ್ನು ಸೌರಚಾಲಿತ ವ್ಯವಸ್ಥೆಯಡಿ ಆರಂಭಿಸಿದ್ದಾರೆ. ಕಬ್ಬಿನ ರಸ ತೆಗೆಯುವ ಯಂತ್ರ, ರೆಫ್ರಿಜರೇಟರ್, ಬೆಳಕಿನ ವ್ಯವಸ್ಥೆ ಎಲ್ಲವೂ ಸಂಪೂರ್ಣವಾಗಿ ಸೋಲಾರ್ನಿಂದ ಕಾರ್ಯಚರಿಸುತ್ತಿದೆ. ಮಹಿಳೆಯ ಸ್ವಾವಲಂಬಿ ಬದುಕಿಗೆ ಸೆಲ್ಕೋ ಸೋಲಾರ್ ಸಂಸ್ಥೆ ದಾರಿ ದೀಪವಾಗಿದೆ.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಶಿವಪ್ಪ ಕುಲಾಲ್ ಎಂಬವರ ಪತ್ನಿ ಇಂದಿರಾ ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಗರ್ ಬತ್ತಿ ತಯಾರಿಕಾ ಘಟಕದಲ್ಲಿ ಹಲವು ವಷರ್ಷಗಳ ಕಾಲ ಕಾರ್ಯ ನಿರ್ವಹಿಸುತಿದ್ದರು. ಇದರಿಂದ ಸ್ಪೂರ್ತಿ ಪಡೆದು ಏನಾದರೂ ಸ್ವ ಉದ್ಯೋಗ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವರ ನೆರೆವಿಗೆ ಬಂದದ್ದು ಸೆಲ್ಕೋ ಸೋಲಾರ್ ಸಂಸ್ಥೆ. ಮಣಿಹಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಸೋಲಾರ್ ಆಧಾರಿತ ಅಂಗಡಿ ವ್ಯವಹಾರವನ್ನು ಆರಂಭಿಸಿದ್ದಾರೆ. ಸಬ್ಸಿಡಿ ಆಧಾರದಲ್ಲಿ ಸಾಲಸೌಲಭ್ಯವನ್ನು ಒದಗಿಸಿ ಮಹಿಳೆಯ ಸ್ವಾವಲಂಬಿ ಉದ್ಯಮಕ್ಕೆ ಸೆಲ್ಕೋ ಸಂಸ್ಥೆ ನೆರವಾಗಿದೆ. ಇವರ ಅಂಗಡಿಯಲ್ಲಿ ತಂಪು ಪಾನೀಯಗಳು ಹಾಗೂ ಹೂವಿನ ಮಾರಾಟ ಇದ್ದು ಅದರ ಅವಶ್ಯಕತೆಗೆ ಸೋಲಾರ್ ರೆಫ್ರಿಜರೇಟರ್ ಅಳವಡಿಸಲಾಗಿದೆ. ಸೋಲಾರ್ ಮೂಲಕ ನಡೆಯುವ ಕಬ್ಬಿನ ಹಾಲು ತೆಗೆಯುವ ಯಂತ್ರವೂ ಇದೆ. ಒಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಸೋಲಾರ್ ವ್ಯವಸ್ಥೆಯೊಂದಿಗೆ ಮಹಿಳೆಯ ವ್ಯವಹಾರ ಕ್ಷೇತ್ರಕ್ಕೆ ಕಾಲಿಡುವ ಕನಸು ನನಸಾಗಿದೆ.

