ಬಂಟ್ವಾಳ: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಶಾಲೆ ಹಾಗೂ ಊರಿಗೆ ಕೀರ್ತಿ ತಂದ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಮಂಗಳವಾರ ಬಂಟ್ವಾಳ ಪೇಟೆಯಲ್ಲಿ ಸಂಭ್ರಮದ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಾದ ವೈಷ್ಣವಿ ಜಿ, ಆಯಿಶಾತುಲ್ ಅಸೀಬಾ, ಸಿ.ಪ್ರತೀಕ್ಷಾಪೈ, ಧನ್ಯತಾ ಬಾಳಿಗಾ, ರಿಕ್ ಪೋವೆಲ್ ಡಿಸೋಜಾ, ಗಗನ್ ಪಿ. ಅಮೀನ್ ಅವರು ಕವ್ವಾಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಶ್ರೀನಿಧಿ ಪಿ.ಎಸ್. ಸಾಮಾನ್ಯ ಕನ್ನಡ ಭಾಷಣದಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಶಾಲಾ ವಿದ್ಯಾರ್ಥಿಗಳ ವಾದ್ಯಗೋಷ್ಠಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು,ಶಿಕ್ಷಕ-ಶಿಕ್ಷಕಿಯರು ಹಾಗೂ ಆಡಳಿತ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶಾಲಾ ವಠಾರದಿಂದ ಹೊರಟ ಮೆರವಣಿಗೆ ಬಂಟ್ವಾಳ ರಥಬೀದಿ, ಬಡ್ಡಕಟ್ಟೆಯವರೆಗೆ ಸಾಗಿ ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜ ರಸ್ತೆಯ ಮೂಲಕ ತೆರಳಿ ಶಾಲೆಯಲ್ಲಿ ಸಂಪನ್ನಗೊಂಡಿತು. ಬಳಿಕ ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಸಮಿತಿ ಹಾಗೂ ಶಿಕ್ಷಕವೃಂದ ಅಭಿನಂದಿಸಿತು.
ಈ ವಿದ್ಯಾರ್ಥಿಗಳಿಗೆ ಲತಾ ಜಾನಕಿ ರಾಜೇಶ್ ಹಾಗೂ ಕಲ್ಪನಾ ಅವರು ಮಾರ್ಗದರ್ಶನ ನೀಡಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇದರ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವದ ಸ್ಪರ್ಧೆ ನಡೆದಿತ್ತು.