ಬಂಟ್ವಾಳ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಪ್ರಾಂತ್ಯ೯ ಇದರ ವಲಯ1,2,3 ಇದರ ಅಂತರ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಬಂಟ್ವಾಳದ ಎಸ್ವಿಎಸ್ ದೇವಳ ಶಾಲೆಯ ಮೈದಾನದಲ್ಲಿ ನಡೆಯಿತು.
ಪ್ರಾಂತ್ಯ 9 ರ ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ಮಾತನಾಡಿ ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಅರ್ಹ ಆಟಗಾರರನ್ನು ಆಯ್ಕೆ ಮಾಡಿ ಸಮರ್ಥವಾದ ಒಂದೇ ತಂಡವನ್ನು ರಚಿಸುವ ಉದ್ದೇಶದಿಂದ ಅಂತರ್ ವಲಯ ಮಟ್ಟದ ಕ್ರಿಕೆಟ್ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು.
ಕ್ರೀಡಾಕೂಟವನ್ನು ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕ ಸದಸ್ಯ ಡಾ. ಎಂ. ಶ್ಯಾಂ ಭಟ್ ಉದ್ಘಾಟಿಸಿ ಶುಭ ಕೋರಿದರು.
ಮುಖ್ಯ ಅತಿಥಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಂನ ಸ್ವಾಮೀ ದೇವಸ್ಥಾನದ ಆಡಳಿತ ಮೋಕ್ತೇಸರ ಅಶೋಕ್ ಶೆಣೈ ಮಾತನಾಡಿ ಕ್ರಿಕೆಟ್ ಆಟದಿಂದ ದೇಹ ಹಾಗೂ ಮನಸ್ಸು ಸಂತುಷ್ಟಗೊಳ್ಳುತ್ತದೆ. ಈ ಮೂಲಕ ಉತ್ತಮ ಆರೋಗ್ಯವನ್ನು ಪಡೆದು ಸಮಾಜದಲ್ಲಿ ಉತ್ತಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದರು. ಈ ಸಂದರ್ಭ ಆಟಗಾರರ ಜರ್ಸಿಯನ್ನು ಬಿಡುಗಡೆಗೊಳಿಸಿ ಮೂರು ವಲಯಗಳ ತಂಡದ ನಾಯಕರಿಗೆ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ವಲಯಾಧ್ಯಕ್ಷರಾದ ರಮಾನಂದ ನೂಜಿಪ್ಪಾಡಿ, ಮನೋರಂಜನ್ ಕೆ.ಆರ್., ವಿಜಯ್, ಪ್ರಮುಖರಾದ ಉಮನಾಥ ರೈ ಮೇರಾವು, ಸಂತೋಷ್, ಜಾನ್ ಸಿರಿಲ್ ಡಿಸೋಜಾ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು, ಪ್ರಾಂತೀಯ ಕಾರ್ಯದರ್ಶಿ ತಪೋಧನ್ ಶೆಟ್ಟಿ ವಂದಿಸಿದರು.