ಬಂಟ್ವಾಳ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ರಿ., ಉಜಿರೆ ಇದರ ರಜತಪರ್ವ- ಶತಕ ತಾಳಮದ್ದಳೆ ಸಪ್ತಾಹ ಸರಣಿಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ಬಿ. ಸಿ. ರೋಡಿನ ಹೋಟೆಲ್ ರಂಗೋಲಿ ಇದರ ಆಶ್ರಯದಲ್ಲಿ ಯಕ್ಷಸಂಜೀವಿನಿ ಟ್ರಸ್ಟ್ ರಿ.ಮುಡಿಪು ಸಹಕಾರದೊಂದಿಗೆ ನಡೆಯುವ ತಾಳಮದ್ದಳೆ ಸಪ್ತಾಹಕ್ಕೆ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ಬಿ.ಗಣೇಶಾನಂದ ಸೋಮಯಾಜಿ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಯಕ್ಷಗಾನ ತಾಳಮದ್ದಳೆ ಸಹಿತ ಕಲಾಪ್ರಕಾರಗಳು ಇಂದು ನವಮಾಧ್ಯಮಗಳಲ್ಲಿ ಸಾಕಷ್ಟು ದೊರಕುತ್ತಿದ್ದರೂ ನೇರವಾಗಿ ಅದನ್ನು ವೀಕ್ಷಿಸುವುದರಿಂದ ರಸಾನುಭವ ಸಾಧ್ಯವಾಗುತ್ತದೆ ಎಂದರು.
ಹಿರಿಯ ಕಲಾವಿದರೂ ವಿಮರ್ಶಕರೂ ಆದ ಡಾ. ಎಂ.ಪ್ರಭಾಕರ ಜೋಷಿ, ಪ್ರಮುಖರಾದ ಭುಜಬಲಿ ಧರ್ಮಸ್ಥಳ, ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್, ಉದ್ಯಮಿ ಸದಾನಂದ ಶೆಟ್ಟಿ ರಂಗೋಲಿ ಮತ್ತು ಸಂಜೀವ ಶೆಟ್ಟಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಶ್ವಭಾರತಿ ಟ್ರಸ್ಟ್ ನ ಪ್ರಶಾಂತ್ ಹೊಳ್ಳ ವಂದಿಸಿದರು.