
ಬಂಟ್ವಾಳ: ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಜ. 14ರಿಂದ 26ರ ವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಸಮಾಲೋಚನಾ ಸಭೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ನಡೆಯುವ 3ನೇ ಪಾದಯಾತ್ರೆ ಇದಾಗಿದ್ದು, ಈ ಹಿಂದೆ ಶಾಸಕನಾಗುವ ಮೊದಲು 2ಪಾದಯಾತ್ರೆಗಳನ್ನು ನಡೆಸಿ ಕ್ಷೇತ್ರದ ಪ್ರತಿ ಗ್ರಾಮಗಳ ಜನತೆಯ ನಾಡಿಮಿಡಿತವನ್ನು ಅರಿತು ಅದಕ್ಕೆ ಪೂರಕವಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ.
ಈ ಬಾರಿ 13 ದಿನಗಳ ಪಾದಯಾತ್ರೆ ನಡೆಸಲಿದ್ದು, ಮುಖ್ಯವಾಗಿ ಪ್ರತಿದಿನ ಕ್ಷೇತ್ರದ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನವನ್ನು ಸಂಪರ್ಕಿಸಲಿದ್ದು, ಪ್ರತಿದಿನ ಸಂಜೆ ಸಮಾರೋಪ ಕಾರ್ಯಕ್ರಮ ನಡೆಸಲಿದ್ದೇವೆ. ಜ. 14ರಂದು ಮಧ್ಯಾಹ್ನ 2ಕ್ಕೆ ಪೊಳಲಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಂಡು, ಜ. 26ರಂದು ಬಿ.ಸಿ.ರೋಡಿನಲ್ಲಿ ಸಮಾರೋಪ ನಡೆಯಲಿದ್ದು, ಉಳಿದಂತೆ ಪ್ರತಿದಿನ ಬೆಳಗ್ಗೆ 8ಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದೆ. ಈ ಯಾತ್ರೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಚರ್ಚೆ, ಕಾರ್ಯಕರ್ತರು, ಗ್ರಾಮೀಣ ಜನತೆಯ ಜತೆ ಸಮಾಲೋಚನೆ ನಡೆಸಲಿದ್ದೇವೆ. ದೈನಂದಿನ ಸಮಾರೋಪ ಸಮಾರಂಭಗಳಲ್ಲಿ ರಾಜ್ಯ, ಜಿಲ್ಲಾ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಪಾದಯಾತ್ರೆ ಸಾಗುವ ಹಾದಿ ಜ. 14ರಂದು ಮಧ್ಯಾಹ್ನ 2ಕ್ಕೆ ಪೊಳಲಿ ಕ್ಷೇತ್ರದಿಂದ ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಕರಿಯಂಗಳ, ತೆಂಕಬೆಳ್ಳೂರು ಗ್ರಾಮಗಳ ಮೂಲಕ ಪಾದಯಾತ್ರೆ ಸಾಗಲಿದೆ. ಜ. 15ರಂದು ನಂದಾವರ ಕ್ಷೇತ್ರದಿಂದ ವಿಟ್ಲಪಡ್ನೂರು ಕಾಪುಮಜಲು ಶ್ರೀ ಮಲರಾಯ ದೈವಸ್ಥಾನಕ್ಕೆ ಸಜೀಪಮುನ್ನೂರು, ಸಜೀಪಮೂಡ, ಮಂಚಿ, ಸಾಲೆತ್ತೂರು, ಕೊಳ್ನಾಡು, ವಿಟ್ಲಪಡ್ನೂರು ಗ್ರಾಮಗಳು, ಜ. 16ರಂದು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಿಂದ ಕರೋಪಾಡಿ ಮಿತ್ತನಡ್ಕ ಶ್ರೀ ಮಲರಾಯ ಪಿಲಿಚಾಮುಂಡಿ ದೈವಸ್ಥಾನಕ್ಕೆ ಕನ್ಯಾನ, ಕರೋಪಾಡಿ ಗ್ರಾಮಗಳ ಮೂಲಕ ಸಾಗಲಿದೆ.
ಜ. 17ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಿಂದ ಪೆರಾಜೆ ಸಾದಿಕುಕ್ಕು ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನಕ್ಕೆ ವೀರಕಂಭ, ಅನಂತಾಡಿ, ನೆಟ್ಲಮುಡ್ನೂರು, ಮಾಣಿ, ಪೆರಾಜೆ, ಜ. 18ರಂದು ಕಡೇಶ್ವಾಲ್ಯ ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಕಡೇಶ್ವಾಲ್ಯ, ಬರಿಮಾರು, ಗೋಳ್ತಮಜಲು ಗ್ರಾಮಗಳು, ಜ. 19ರಂದು ಅಮ್ಟೂರು ಕೇಶವನಗರ ಶ್ರೀ ಶಾರದಾ ಮಂದಿರದಿಂದ ನೀರಪಾದೆ ಶ್ರೀ ಕುಂದಾಯ ರಕ್ತೇಶ್ವರೀ ಮಹಮ್ಮಾಯಿ ದೇವಸ್ಥಾನಕ್ಕೆ ಅಮ್ಟೂರು, ಪಾಣೆಮಂಗಳೂರು, ನರಿಕೊಂಬು, ಶಂಭೂರು, ಬಾಳ್ತಿಲ ಗ್ರಾಮಗಳು, ಜ. 20ರಂದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಕಸ್ಬಾ, ನಾವೂರು, ದೇವಶ್ಯಪಡೂರು, ದೇವಶ್ಯಮೂಡೂರು, ಸರಪಾಡಿ ಗ್ರಾಮಗಳಿಗೆ ಸಾಗಲಿದೆ.
ಜ. 21ರಂದು ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪಾಂಡವರಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಮಣಿನಾಲ್ಕೂರು, ಉಳಿ, ತೆಂಕಕಜೆಕಾರು ಗ್ರಾಮಗಳು, ಜ. 22ರಂದು ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಸಿದ್ದಕಟ್ಟೆ ಶ್ರೀ ನಾರಾಯಣ ಗುರು ಮಂದಿರಕ್ಕೆ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಕೊಡಂಬೆಟ್ಟು, ಪಿಲಿಮೊಗರು, ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಕ್ಕಿಪಾಡಿ, ಎಲಿಯನಡುಗೋಡು, ಸಂಗಬೆಟ್ಟು ಗ್ರಾಮಗಳು, ಜ. ೨೩ರಂದು ಕಾರಿಂಜ ಕ್ಷೇತ್ರದಿಂದ ರಾಯಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಕಾವಳಮೂಡೂರು, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಬುಡೋಳಿ, ಪಂಜಿಕಲ್ಲು, ಕೊಯಿಲ, ರಾಯಿ ಗ್ರಾಮಗಳು, ಜ. 24ರಂದು ಕರ್ಪೆ ಶ್ರೀ ಕುಪ್ಪೆಟ್ಟು ಬರ್ಕೆ ಪಂಜುರ್ಲಿ ಮೂಲಸ್ಥಾನದಿಂದ ಕುರಿಯಾಳ ದುರ್ಗಾನಗರ ಶ್ರೀ ಓಂಕಾರೇಶ್ವರೀ ಭಜನಾ ಮಂದಿರಕ್ಕೆ ಕರ್ಪೆ, ಅರಳ, ಬಡಗಬೆಳ್ಳೂರು, ಕುರಿಯಾಳ ಗ್ರಾಮಗಳು, ಜ. 25ರಂದು ಮಂಗ್ಲಿಮಾರ್ ದೈವಸ್ಥಾನದಿಂದ ದೇವಂಬೆಟ್ಟು ದೇವಸ್ಥಾನಕ್ಕೆ ಅಮ್ಟಾಡಿ, ಅಮ್ಮುಂಜೆ, ಕಳ್ಳಿಗೆ ಗ್ರಾಮಗಳಿಗೆ ಸಾಗಲಿದೆ. ಜ. 26ರಂದು ಮಧ್ಯಾಹ್ನ 2ಕ್ಕೆ ಬಿ.ಸಿ.ರೋಡಿನ ಕೈಕಂಬದಿಂದ ಹೊರಟು ಬಿ.ಸಿ.ರೋಡಿನಲ್ಲಿ ಸಮಾರೋಪ ನೆರವೇರಲಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ ಉಪಸ್ಥಿತರಿದ್ದರು.
