ಬಂಟ್ವಾಳ: ತುಂಬೆ ಗ್ರಾಮ ಪಂಚಾಯತಿಯ ಸ್ಥಳಾಂತರಿತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಗ್ರಾಮಕರಣಿಕರ ಕಚೇರಿಯ ಉದ್ಘಾಟನಾ ಸಮಾರಂಭ ಗುರುವಾರ ಬೆಳಿಗ್ಗೆ ನಡೆಯಿತು.
ಸ್ಥಳಾಂತರಿತ ಗ್ರಂಥಾಲಯವನ್ನು ತುಂಬೆ ಗ್ರಾ.ಪಂ. ಅಧ್ಯಕ್ಷ. ಪ್ರವೀಣ್ ಬಿ. ತುಂಬೆ ಉದ್ಘಾಟಿಸಿದರು. ಅವರು ಮಾತನಾಡಿ ಈ ಹಿಂದೆ ಸಣ್ಣ ಕೊಠಡಿಯಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ಗ್ರಾಮಸ್ಥರ ಅನುಕೂಲದ ದೃಷ್ಟಿಯಿಂದ ಇದೀಗ ವಿಸ್ತಾರವಾದ ಕೊಠಡಿಗೆ ಗ್ರಂಥಾಲಯನ್ನು ಸ್ಥಳಾಂತರಿಸಲಾಗಿದೆ, ಈ ಜ್ಞಾನ ಭಂಡಾರದ ಉಪಯೋಗ ಸಮಸ್ತ ಗ್ರಾಮಸ್ಥರಿಗೂ ಸಿಗಬೇಕು ಎಂದರು. ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಬಳಿಕ ಇದೇ ಕಟ್ಟಡದಲ್ಲಿ ಗ್ರಾಮ ಕರಣಿಕರ ಕಚೇರಿಯನ್ನು ಪಂಚಾಯತಿ ಹಿರಿಯ ಸದಸ್ಯ ಮಹಮ್ಮದ್ ವಳವೂರು ಉದ್ಘಾಟಿಸಿದರು. ಅವರು ಮಾತನಾಡಿ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಂಡಿರುವ ವಿಎ ಕಚೇರಿಯಿಂದ ಗ್ರಾಮದ ಎಲ್ಲಾ ಜನರಿಗೂ ಉತ್ತಮ ಸೇವೆ ಸಿಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷೆ ಜಯಂತಿ ಕೇಶವ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಸದಾಶಿವ ಡಿ. ತುಂಬೆ, ಸಿಡಿಪಿಒ ಗಾಯತ್ರಿ ಕಂಬಳಿ, ಜಿ.ಪಂ. ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಪಂಚಾಯತಿ ಸದಸ್ಯರಾದ ಗಣೇಶ್ ಸಾಲ್ಯಾನ್, ಇಬ್ರಾಹಿಂ ವಳವೂರು, ಕಿಶೋರ್ ರಾಮಲ್ ಕಟ್ಟೆ, ಅಬ್ದುಲ್ ಅಜೀಜ್, ಮಹಮ್ಮದ್ ಝಹೂರ್, ಅರುಣ್ ಗಾಣದಲಚ್ಚಿಲ್, ಹೇಮಲತಾ ಜಿ. ಪೂಜಾರಿ, ಶಶಿಕಲಾ ಮನೋಹರ ಕೊಟ್ಟಾರಿ, ಜಯಂತಿ ನಾಗೇಶ, ಜಯಂತಿ ಶ್ರೀಧರ್, ಆತಿಕಾ ಬಾನು, ಜೆಸಿಂತಾ ಡಿಸೋಜಾ, ಪಿಡಿಓ ಚಂದ್ರಾವತಿ, ಲೆಕ್ಕ ಸಹಾಯಕಿ ಚಂದ್ರಕಲಾ ಗ್ರಾಮಕರಣಿಕ ಪ್ರಶಾಂತ್, ಪ್ರಮುಖರಾದ ಎಂ.ಆರ್. ನಾಯರ್, ಪ್ರಕಾಶ್ ಆಚಾರ್ಯ, ಮನೋಹರ ಕೊಟ್ಟಾರಿ, ದಿನೇಶ್ ಪರ್ಲಕೆ, ಜಗದೀಶ್ ಗಟ್ಟಿ ಪರ್ಲಕೆ ಮತ್ತಿತರರು ಉಪಸ್ಥಿತರಿದ್ದರು.