ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಗ್ಗೆ ಸಜೀಪನಡು ಮತ್ತು ಸಜೀಪಪಡು ಗ್ರಾಮಗಳ ಭಕ್ತರ ಪೂರ್ವಭಾವಿ ಸಮಾಲೋಚನಾ ಸಭೆಯು ಸಜೀಪನಡು ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ದೇವಳದ ಅಭಿವೃದ್ಧಿ, ಬ್ರಹ್ಮಕಲಶೋತ್ಸವದದಲ್ಲಿ ಎಲ್ಲರ ಅಳಿಲ ಸೇವೆಯೊಂದಿಗೆ ನಡೆಸಬೇಕಾಗಿದೆ. ಅದಕ್ಕಾಗಿ ನಮ್ಮೆಲ್ಲರ ಸೌಭಾಗ್ಯ ಎನ್ನುವ ನಿಟ್ಟಿನಲ್ಲಿ ಸಹಭಾಗಿಗಳಾಗೋಣ ಎಂದು ಶುಭ ಹಾರೈಸಿದರು.
ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿ.ಎಂ. ಪ್ರಸ್ತಾವನೆ ಮಾಡುತ್ತಾ, ಮನೆ ಮನೆಗಳಿಗೆ ಆಮಂತ್ರಣ ಪತ್ರ ವಿತರಣೆ ಕಾರ್ಯ ಶೀಘ್ರವಾಗಿ ನಡೆಯಬೇಕಿದ್ದು, ಎಲ್ಲರೂ ಸಹಕರಿಸುವಂತೆಯೂ, ಎಲ್ಲಾ ಮನೆಗಳಿಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿಕೆಯ ಕ್ರಮವನ್ನು ವಿವರಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರೂ, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಯಶವಂತ ದೇರಾಜೆಗುತ್ತು ಮಾತನಾಡಿ ಸಜೀಪಮಾಗಣೆಯ ಎಲ್ಲಾ ಭಕ್ತರು ಆಮಂತ್ರಣ ಪತ್ರಿಕೆ ಎಲ್ಲಾ ಮನೆಗಳಿಗೆ ತಲುಪಿಸುವ ಜೊತೆಗೆ ಪ್ರತಿಯೊಂದು ಮಠ ಮಂದಿರಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮಾಡುವಂತಹ ಕಾರ್ಯಗಳಿಗೆ ಈಗಿಂದಲೇ ಸನ್ನದ್ಧರಾಗಬೇಕಿದೆ ಎಂದರು.
ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ ವಹಿಸಿ, ಆಮಂತ್ರಣ ಪತ್ರಿಕೆಯನ್ನು ಗ್ರಾಮಗಳ ಬೂತ್ ಪ್ರಮುಖರಿಗೆ ನೀಡಿದರು. ಅಭ್ಯಾಗತರಾಗಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳ್ಳುಂಜ ವೆಂಕಟೇಶ್ವರ ಭಟ್ ಶುಭಾಶಂಸನೆಗೈದರು. ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ವಿಶ್ವನಾಥ ಆಳ್ವ, ಶಿವರಾಮ ಭಂಡಾರಿ ಬಿಜಂತಾಡಿಗುತ್ತು, ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಕಿಶನ್ ಶೇಣವ, ಪ್ರಮುಖರಾದ ಸುಧಾಕರ ಕೆ.ಟಿ., ರಾಮಕೃಷ್ಣ ಭಟ್, ಹರೀಶ್ ಬಂಗೇರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಬಂಗೇರ ಆರ್ಯಾಪು ಸ್ವಾಗತಿಸಿ ನಿರೂಪಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಭಾಸ್ಕರ್ ಕಂಪದಕೋಡಿ ವಂದಿಸಿದರು.